ಅಣಕು ಕಾರ್ಯಾಚರಣೆಯಿಂದ ಸಾವುಗಳು ಸಂಭವಿಸಿಲ್ಲ: ಆಗ್ರಾದ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿದ ಸರಕಾರ ನೇಮಿತ ಸಮಿತಿ

Update: 2021-06-19 09:57 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ :  ಆಗ್ರಾದ ಶ್ರೀ ಪಾರಸ್ ಆಸ್ಪತ್ರೆ ಕೋವಿಡ್ ಎರಡನೇ  ಅಲೆಯ ಸಂದರ್ಭ ಐಸಿಯುವಿನಲ್ಲಿದ್ದ ರೋಗಿಗಳ  ಮೇಲೆ ʼಅಣಕು ಕಾರ್ಯಾಚರಣೆ' ನಡೆಸಿತ್ತು ಎಂದು ಆಸ್ಪತ್ರೆಯ ಮಾಲಕ ಅರಿಂಜಯ್ ಜೈನ್ ಎಂಬವರು  ಹೇಳಿದ್ದಾರೆನ್ನಲಾದ ವೈರಲ್ ಆಡಿಯೋ ಕ್ಲಿಪ್ ಪ್ರಕರಣದಲ್ಲಿ  ಉತ್ತರ ಪ್ರದೇಶ ಸರಕಾರ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿದೆ.

ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯುಂಟಾದರೆ ಏನಾಗಬಹುದೆಂದು ತಿಳಿಯಲು ಈ ಅಣಕು ಕಾರ್ಯಾಚರಣೆ ನಡೆದಿತ್ತೆಂದು ಆಡಿಯೋ ಕ್ಲಿಪ್‍ನಿಂದ ತಿಳಿಯುತ್ತದೆ.

ಎಪ್ರಿಲ್ 28ನೇ ತಾರೀಕಿನದ್ದೆಂದು ಹೇಳಲಾದ ಈ 1.5 ನಿಮಿಷ ಅವಧಿಯ ಆಡಿಯೋ ಕ್ಲಿಪ್‍ನಲ್ಲಿ ಜೈನ್ ಹೀಗೆ ಹೇಳುವುದು ಕೇಳಿಸುತ್ತದೆ. ʼಮುಖ್ಯಮಂತ್ರಿಗೆ ಕೂಡ  ಆಕ್ಸಿಜನ್ ದೊರೆಯುತ್ತಿಲ್ಲವೆಂದು ನಮಗೆ ಹೇಳಲಾಯಿತು, ಅದಕ್ಕೆ ರೋಗಿಗಳನ್ನು ಡಿಸ್ಜಾರ್ಜ್‍ಗೊಳಿಸಲು ಆರಂಭಿಸಿ. ಕೆಲವರು ನಮ್ಮ ಮಾತುಗಳನ್ನು ಕೇಳಲು ಸಿದ್ಧರಿದ್ದರೆ ಇತರರು ಹೋಗಲು ತಯಾರಿರಲಿಲ್ಲ. ನಾನು ಸರಿ, ನಾವೊಂದು ಅಣಕು ಅಭ್ಯಾಸ ಮಾಡುವ ಎಂದು ಹೇಳಿದೆ. ಯಾರು ಬದುಕುತ್ತಾರೆ ಹಾಗೂ ಯಾರು ಸಾಯುತ್ತಾರೆ ಎಂದು  ಕಂಡು ಹಿಡಿಯುವ ಎಂದು ಹೇಳಿದೆ. ಅದಕ್ಕೆ ಬೆಳಿಗ್ಗೆ 7 ಗಂಟೆಗೆ ಅಣಕು ಕಾರ್ಯಾಚರಣೆ ನಡೆಸಲಾಯಿತು, ಯಾರಿಗೂ ಗೊತ್ತಿಲ್ಲ, ನಂತರ ನಾವು 22 ರೋಗಿಗಳನ್ನು  ಗುರುತಿಸಿದೆವು. ಅವರು ಸಾಯುತ್ತಾರೆಂದು ನಮಗೆ ತಿಳಿಯಿತು. ನಾವು ಇದನ್ನು 5 ನಿಮಿಷ ಮಾಡಿದೆವು. ಅವರ ದೇಹ ನೀಲಿ ಬಣ್ಣಕ್ಕೆ ತಿರುಗಲಾರಂಭಿಸಿದ್ದವು"

ಈ ಆಡಿಯೋ ಕ್ಲಿಪ್ ಸುದ್ದಿಯಾಗುತ್ತಿದ್ದಂತೆಯೇ ತನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಜೈನ್ ಹೇಳಿದ್ದಾರಲ್ಲದೆ ತಮ್ಮ ಆಸ್ಪತ್ರೆ ಯಾವತ್ತೂ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿಲ್ಲ, ಬದಲು ಯಾವ ರೋಗಿಗಳಿಗೆ ಹೈ-ಫ್ಲೋ ಆಕ್ಸಿಜನ್ ಬೇಕಿದೆ ಎಂದು ಪರಿಶೀಲಿಸಿತ್ತು ಎಂದಿದ್ದಾರೆ. ಘಟನೆ  ಎಪ್ರಿಲ್ 26ರಂದು ನಡೆದಿದೆಯೆನ್ನಲಾಗಿದ್ದು ಎಪ್ರಿಲ್ 28ರಂದು ಜೈನ್ ಅವರ ಮಾತುಗಳ ಕ್ಲಿಪ್ ವೈರಲ್ ಆಗಿತ್ತು.

ಈ ಆಸ್ಪತ್ರೆಯಲ್ಲಿ ಎಪ್ರಿಲ್ 26 ಹಾಗೂ 27ರಂದು ಏಳು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದರು. ಈ ನಡುವೆ ಅಣಕು ಕಾರ್ಯಾಚರಣೆ ವೇಳೆ 22 ರೋಗಿಗಳು ಮೃತಪಟ್ಟಿದ್ದರೆಂದು ಕೆಲ ವರದಿಗಳು ಹೇಳಿವೆ.

ಆಸ್ಪತ್ರೆಯಲ್ಲಿ ಎಪ್ರಿಲ್ 15 ಹಾಗೂ 25ರ ನಡುವೆ 16 ಸಾವುಗಳು ಸಂಭವಿಸಿವೆ ಎಂದು ಭಾರೀ ಆಕ್ರೋಶದ ನಂತರ ಉತ್ತರ ಪ್ರದೇಶ ಸರಕಾರ ರಚಿಸಿದ ತನಿಖಾ ಸಮಿತಿಯ ತನಿಖೆಯಿಂದ ತಿಳಿದು ಬಂದಿದೆ ಆದರೆ ಯಾವ ಸಾವುಗಳು ಅಣಕು ಅಭ್ಯಾಸದಿಂದಾಗಿ ನಡೆದಿಲ್ಲ ಎಂದೂ ಸಮಿತಿ ಕಂಡುಕೊಂಡಿದೆಯೆನ್ನಲಾಗಿದೆ. 

ಮೃತಪಟ್ಟ 16 ರೋಗಿಗಳ ಪೈಕಿ 14 ಮಂದಿಗೆ ಇತರ ಆರೋಗ್ಯ ಸಮಸ್ಯೆಗಳಿದ್ದವು ಹಾಗೂ ಉಳಿದ ಇಬ್ಬರಿಗೆ ಶ್ವಾಸಕೋಶದ ಸೋಂಕು ಮತ್ತು ಇತರ ಉರಿಯೂತಗಳಿದ್ದವು ಎಂದು ವರದಿ  ಹೇಳಿದೆ. ಯಾವುದೇ ರೋಗಿಯ ಆಕ್ಸಿಜನ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿಲ್ಲ ಎಂದೂ ತನಿಖಾ ತಂಡ ಕಂಡುಕೊಂಡಿದೆಯೆಂದು ಹೇಳಲಾಗಿದ್ದು ಈ ಅಂಶಗಳನ್ನು ಪರಿಗಣಿಸಿ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News