ದನ ಸಾಗಾಟ ತಡೆಯಲು ಮುಂದಾದ 'ಗೋರಕ್ಷಕ' ಟೆಂಪೊ ಹರಿದು ಮೃತ್ಯು

Update: 2021-06-20 19:44 GMT

ಅಹಮದಾಬಾದ್: ದನ ಸಾಗಾಟ ತಡೆಯಲು ಆಗಮಿಸಿದ್ದ  ಸ್ವಯಂ ಘೋಷಿತ ಗೋರಕ್ಷಕ ಹಾಗೂ ವಲ್ಸಾಡ್ ಜಿಲ್ಲೆಯ ಧರಂಪುರ ತಾಲ್ಲೂಕಿನ ಮಾಜಿ ವಿಎಚ್‌ಪಿ ಅಧ್ಯಕ್ಷನ  ಮೇಲೆ ಜಾನುವಾರು ಹೊತ್ತ ಟೆಂಪೊವೊಂದು ಹರಿದು ಮೃತಪಟ್ಟಿದ್ದಾನೆ ಎಂದು ವರದಿಯಾಗಿದ್ದು ಪೊಲೀಸರು ಪ್ರಕರಣ  ದಾಖಲಿಸಿದ್ದು, ಐವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ.

ವಲ್ಸಾಡ್ ಜಿಲ್ಲಾ ಪೊಲೀಸರ ಪ್ರಕಾರ, ಹಾರ್ದಿಕ್ ಕನ್ಸಾರ (29)  ಶುಕ್ರವಾರ ಮುಂಜಾನೆ ದನಗಳನ್ನು  ಹೊತ್ತ ವಾಹನ  ಬರಲಿದೆ ಎಂಬ ಮಾಹಿತಿ  ಪಡೆದು  ಧರಂಪುರ-ವಲ್ಸಾದ್ ರಸ್ತೆಯ ಬಾಮ್ ಕ್ರೀಕ್ ಸೇತುವೆಯಲ್ಲಿ ಕಾದು ಕುಳಿತ್ತಿದ್ದ. ಕನ್ಸಾರ ಹಾಗೂ ಇನ್ನಿಬ್ಬರು ಸ್ವಘೋಷಿತ ಗೋರಕ್ಷಕರಾದ ಆಕಾಶ್ ಜಾನಿ ಮತ್ತು ವಿಮಲ್ ಭರದ್ ರಸ್ತೆಯ ಮಧ್ಯದಲ್ಲಿ ಟ್ರಕ್ ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು. ಟೆಂಪೊ ಚಾಲಕ  ಟ್ರಕ್ ಬಳಿ ನಿಂತಿದ್ದ ಕನ್ಸಾರ ಮೇಲೆ ವಾಹನವನ್ನು ಓಡಿಸಿದ್ದಾನೆ. ಬಳಿಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡಿದ್ದ ಕನ್ಸಾರ ನನ್ನು ಸ್ನೇಹಿತರಿಬ್ಬರು ತಕ್ಷಣವೇ  ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ದನಗಳನ್ನು ವಲ್ಸಾಡ್ ಜಿಲ್ಲೆಯ ಧರ್ಮಪುರ ತಾಲೂಕಿನ ಬರ್ಸೋಲ್ ಗ್ರಾಮದಲ್ಲಿ ಟೆಂಪೊಕ್ಕೆ ತುಂಬಿಸಲಾಗಿದೆ. ಇವುಗಳನ್ನು ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು.  ಹಾರ್ದಿಕ್ ದನ ಸಾಗಾಟದ ಮಾಹಿತಿ ಪಡೆದಿದ್ದ. ನಮ್ಮ ಪೊಲೀಸರು ಇದರ ಮೇಲೆ ಕಣ್ಣಿಟ್ಟಿದ್ದರು. ಕೆಲವೇ ಅಂತರದಲ್ಲಿ ನಮ್ಮ ತಂಡ ಟೆಂಪೊವನ್ನು ಹಿಂಬಾಲಿಸುತ್ತಿತ್ತು. ಆದರೆ ರಾತ್ರಿಯಲ್ಲಿ ಟೆಂಪೊ ಮಾಯವಾಗಿತ್ತು. ನಾವು ಟೆಂಪೊ ಮಾಲಕನನ್ನು, ದನಗಳ ಮಾಲಕರನ್ನು ಕಂಡು ಹಿಡಿಯಲು ಯತ್ನಿಸುತ್ತಿದ್ದು, ಇವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂದು ಪತ್ತೆ ಹಚ್ಚುತ್ತಿದ್ದೇವೆ ಎಂದು ವಲ್ಸಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್ ದೀಪ್ ಸಿನ್ಹಾ The Indian Express ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News