ಲಕ್ಷದ್ವೀಪ ಆಡಳಿತಾಧಿಕಾರಿ ಕೈಗೊಂಡಿದ್ದ ಎರಡು ವಿವಾದಾತ್ಮಕ ಕ್ರಮಗಳಿಗೆ ಕೇರಳ ಹೈಕೋರ್ಟ್‌ ತಡೆ

Update: 2021-06-22 12:05 GMT

ಕೊಚ್ಚಿ: ಲಕ್ಷದ್ವೀಪದ ನೂತನ ಆಡಳಿತಾಧಿಕಾರಿ ಪ್ರಫುಲ್‌ ಖೋಡಾ ಪಟೇಲ್‌ ಆದೇಶ ನೀಡಿದ್ದ ಎರಡು ವಿವಾದಾತ್ಮಕ ಕಾನೂನುಗಳಿಗೆ ಕೇರಳ ಹೈಕೋರ್ಟ್‌ ತಡೆ ನೀಡಿದೆ ಎಂದು ತಿಳಿದು ಬಂದಿದೆ. ಲಕ್ಷದ್ವೀಪದಲ್ಲಿನ ಡೈರಿ ಫಾರ್ಮ್‌ ಗಳನ್ನು ಮುಚ್ಚುಗಡೆ ಮಾಡುವುದು ಮತ್ತು ಶಾಲಾ ಮಕ್ಕಳ ಊಟದ ಮೆನುವಿನಿಂದ ಬೀಫ್‌, ಚಿಕನ್‌ ಸೇರಿದಂತೆ ಮಾಂಸಾಹಾರಗಳನ್ನು ರದ್ದುಪಡಿಸುವ ಆದೇಶಗಳಿಗೆ ಹೈಕೋರ್ಟ್‌ ತಡೆ ನೀಡಿದೆ ಎಂದು madhyamam ವರದಿ ಮಾಡಿದೆ.

ಪ್ರಕರಣವನ್ನು ಆಲಿಸಿದ ಹೈಕೋರ್ಟ್‌ ನ್ಯಾಯಾಧೀಶರು ಈ ಎರಡು ವಿವಾದಾತ್ಮಕ ಕಾಯ್ದೆಗಳಿಗೆ ತಡೆ ನೀಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನವಾಗುವವರೆಗೂ ಈ ತಡೆ ಜಾರಿಯಲ್ಲಿರಲಿದೆ ಎಂದು ಹೈಕೋರ್ಟ್‌ ತಿಳಿಸಿದೆ.

ಲಕ್ಷದ್ವೀಪದಲ್ಲಿ ಹೈನುಗಾರಿಕೆ ನಡೆಸುವ ಡೈರಿ ಫಾರ್ಮಗಳನ್ನು ಮುಚ್ಚುಗಡೆ ಮಾಡಬೇಕು ಎಂಬ ಆದೇಶವು ಏಕಪಕ್ಷೀಯವಾಗಿದೆ. ಇದನ್ನು ಮುಂದುವರಿಯಲು ಬಿಡಬಾರದು. ಪ್ರಫುಲ್‌ ಖೋಡಾ ಪಟೇಲ್‌ ರ ಈ ತೀರ್ಮಾನದ ಕಾರಣದಿಂದ ಹಲವಾರು ಪಶುಗಳು ಸಂರಕ್ಷಣೆಯಿಲ್ಲದೇ ಸಾಯುತ್ತಿವೆ. ಅಲ್ಲದೇ ಗುಜರಾತ್‌ ನ ಕೆಲ ಕಂಪೆನಿಗಳನ್ನು ಲಕ್ಷದ್ವೀಪದಲ್ಲಿ ನೆಲೆಯೂರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 

ಶಾಲಾ ಮಕ್ಕಳ ಊಟದ ಮೆನುವಿನಿಂದ ಬೀಫ್‌ ಅನ್ನು ತೆರವುಗೊಳಿಸಿರುವುದು ಒಂದು ರಾಜಕೀಯ ನಡೆಯಾಗಿದೆ. ಆದ್ದರಿಂದ ಲಕ್ಷದ್ವೀಪದ ಜನರ ಜೀವನಕ್ಕೆ, ಸಂಸ್ಕೃತಿಗೆ ಬಾಧಕವಾಗುವ ಇಂತಹಾ ಎಲ್ಲಾ ನಿಯಮಗಳಿಗೆ ನ್ಯಾಯಾಲಯವು ಮಧ್ಯಪ್ರವೇಶಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕವರತ್ತಿ ನಿವಾಸಿ ಅಜ್‌ಮಲ್‌ ಅಹ್ಮದ್‌ ಎಂಬ ವಕೀಲ ಈ ಅರ್ಜಿಯನ್ನು ಹೈಕೋರ್ಟ್‌ ನಲ್ಲಿ ದಾಖಲಿಸಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News