ತಿರುಪತಿ ದೇವಸ್ಥಾನದಲ್ಲಿ ಅಮಾನ್ಯಗೊಂಡ 50ಕೋಟಿ ರೂ. ನೋಟುಗಳು: ಮಧ್ಯಪ್ರವೇಶಕ್ಕೆ ವಿತ್ತಸಚಿವೆ ನಕಾರ

Update: 2021-06-22 14:32 GMT

ತಿರುಪತಿ: ಪ್ರಖ್ಯಾತ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರಿಂದ ಕಾಣಿಕೆಯ ರೂಪದಲ್ಲಿ ಬಂದ 50ಕೋಟಿ ರೂ.ಯಷ್ಟು ಅಮಾನ್ಯಗೊಂಡ 500 ಮತ್ತು 1000ರೂ. ನೋಟುಗಳಿದ್ದು, ಈ ಕುರಿತು ಹಣಕಾಸು ಸಚಿವೆಯು ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ. 

ಸುಮಾರು 50ಕೋಟಿ ರೂ.ಗಳಷ್ಟಿರುವ ಹಳೆಯ ನೋಟುಗಳನ್ನು ಏನು ಮಾಡಬೇಕೆಂದು ಟ್ರಸ್ಟ್‌ ಗೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ತಿರುಪತಿ ತಿರುಮಲ ದೇವಾಲಯ ಟ್ರಸ್ಟ್‌ ನ ಅಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ. ಜೂನ್‌ 19ರಂದು ಮಂಡಳಿಯ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 2 ವರ್ಷಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಈ ಕುರಿತು ನಾಲ್ಕು ಬಾರಿ ತಿಳಿಸಿದ್ದೇನೆ ಎಂದು ಅವರು ಹೇಳಿದರು. 

"ಅಮಾನ್ಯಗೊಂಡ ನೋಟುಗಳನ್ನು ಠೇವಣಿ ಇರಿಸಲು ಅಥವಾ ವಿನಿಮಯ ಮಾಡಲು ಇತರ ಸಂಸ್ಥೆಗಳು ಅವಕಾಶ ನೀಡಿದರೆ ಈ ಬಗ್ಗೆ ಯೋಚಿಸಬಹುದು" ಎಂದು ಹಣಕಾಸು ಸಚಿವೆ ಪ್ರತಿಕ್ರಿಯೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ಕೇಂದ್ರ ಸರಕಾರವು ನವೆಂಬರ್‌ 2016ರಲ್ಲಿ 500 ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕವೂ ಹಲವು ಮಂದಿ ಭಕ್ತರು ಈ ನೋಟುಗಳನ್ನು ಕಾಣಿಕೆ ಹುಂಡಿಯಲ್ಲಿ ಹಾಕುತ್ತಿದ್ದರು ಎನ್ನಲಾಗಿದೆ. ಅಮಾನ್ಯೀಕರಣದ ಬಳಿಕವೂ ದೇವಸ್ಥಾನಕ್ಕೆ 1,000 ಲಕ್ಷದ 1.8 ಲಕ್ಷ ನೋಟುಗಳು (18 ಕೋಟಿ ರೂ.) ಮತ್ತು 6.34 ಲಕ್ಷ ನೋಟುಗಳು 500 ರೂ. (31.7 ಕೋಟಿ ರೂ.)ಯಷ್ಟು ದೇಣಿಗೆಯ ರೂಪದಲ್ಲಿ ಬಂದಿದೆ ಎಂದು ವರದಿ ತಿಳಿಸಿದೆ.

ಒಟ್ಟು 49.7ಕೋಟಿ ರೂ.ಯ ನೋಟುಗಳಿಗೆ ಭಕ್ತಿ ಮತ್ತು ಭಾವನಾತ್ಮಕ ಮೌಲ್ಯವಿದೆ. ಆದ್ದರಿಂದ ಅದನ್ನು ನಾಶಪಡಿಸಲು ಟ್ರಸ್ಟ್‌ ಹಿಂದೇಟು ಹಾಕುತ್ತಿದೆ ಎಂದು ಸುಬ್ಬಾರೆಡ್ಡಿ ಹೇಳಿದರು. "ಅದನ್ನು ಈಗ ಏನು ಮಾಡುವುದೆಂದು ತಿಳಿದಿಲ್ಲ. ನೋಟುಗಳನ್ನು ವಿಲೇವಾರಿ ಮಾಡಬಹುದೇ ಎಂದು ನಾವು ಭಾರತೀಯ ರಿಸರ್ವ್‌ ಬ್ಯಾಂಕ್‌ ನೊಂದಿಗೆ ಕೇಳಿಕೊಂಡಿದ್ದೆವು. ಇದು ಭಕ್ತರ ಹಣ. ಇದನ್ನು ನಾಶಪಡಿಸಲೂ ಸಾಧ್ಯವಿಲ್ಲ" ಎಂದು ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News