ನ್ಯೂಸ್ ಕ್ಲಿಕ್, ಸಂಪಾದಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಈ.ಡಿ.ಗೆ ದಿಲ್ಲಿ ಹೈಕೋರ್ಟ್ ನಿರ್ದೇಶ

Update: 2021-06-22 15:31 GMT

ಹೊಸದಿಲ್ಲಿ,ಜೂ.22: ಅಕ್ರಮ ಹಣ ವಹಿವಾಟು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜುಲೈ 5ರವರೆಗೆ ಸ್ವತಂತ್ರ ಸುದ್ದಿ ಜಾಲತಾಣ ನ್ಯೂಸ್‌ ಕ್ಲಿಕ್ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾಲಯ (ಈ.ಡಿ)ಕ್ಕೆ ನಿರ್ದೇಶ ನೀಡಿದೆ.

 ‌ಕಳೆದ ಫೆಬ್ರವರಿಯಲ್ಲಿ ನ್ಯೂಸ್‌ ಕ್ಲಿಕ್ ಕಚೇರಿ ಮತ್ತು ಅದರ ಪತ್ರಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಈ.ಡಿ.ಯ ಶೋಧ ಕಾರ್ಯಾಚರಣೆ ಸುಮಾರು 114 ಗಂಟೆಗಳಷ್ಟು ಸುದೀರ್ಘ ಸಮಯ ಮುಂದುವರಿದಿದ್ದು,‌ ಈ ಅವಧಿಯಲ್ಲಿ ಪುರಕಾಯಸ್ಥ (73) ಮತ್ತು ಅವರ ಪಾಲುದಾರರಾದ ಲೇಖಕಿ ಗೀತಾ ಹರಿಹರನ್ ಅವರನ್ನು ಮನೆಯಲ್ಲಿಯೇ ನಿರ್ಬಂಧಿಸಲಾಗಿತ್ತು.

ಈ.ಡಿ.ಪ್ರಕರಣದ ಮಾಹಿತಿ ವರದಿ ಮತ್ತು ಮಧ್ಯಂತರದಲ್ಲಿ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮದಿಂದ ರಕ್ಷಣೆಯನ್ನು ಕೋರಿ ನ್ಯೂಸ್‌ ಕ್ಲಿಕ್ ಮತ್ತು ಪುರಕಾಯಸ್ಥ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ನ್ಯಾ.ಜಸ್ಮೀತ್ ಸಿಂಗ್ ಅವರ ರಜಾಕಾಲದ ಪೀಠವು ನ್ಯೂಸ್‌ ಕ್ಲಿಕ್ ನ ಒಡೆತನವನ್ನು ಹೊಂದಿರುವ ಪಿಪಿಕೆ ನ್ಯೂಸ್‌ ಕ್ಲಿಕ್ ಸ್ಟುಡಿಯೊ ಪ್ರೈ.ಲಿ. ಮತ್ತು ಕಂಪನಿಯ ನಿರ್ದೇಶಕರೂ ಆಗಿರುವ ಪುರಕಾಯಸ್ಥ ಅವರಿಗೆ ಜು.5ರವರೆಗೆ ಬಲವಂತದ ಕ್ರಮದ ವಿರುದ್ಧ ರಕ್ಷಣೆಯನ್ನು ಒದಗಿಸಿದರು.
  
ಎರಡು ವಾರಗಳಲ್ಲಿ ಅರ್ಜಿಗೆ ಉತ್ತರಿಸುವಂತೆ ಈ.ಡಿ.ಗೆ ಸೂಚಿಸಿದ ನ್ಯಾಯಾಲಯವು ಕಳೆದ ವರ್ಷ ಆರ್ಥಿಕ ಅಪರಾಧಗಳ ಘಟಕವು ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ನ್ಯೂಸ್‌ ಕ್ಲಿಕ್ ನ ಮಾಲಿಕರು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶವನ್ನೂ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News