ಗಾಝಾ ಪಟ್ಟಿಯಲ್ಲಿನ ಸ್ಥಿತಿ ಕುರಿತ ಹಮಾಸ್-ವಿಶ್ವಸಂಸ್ಥೆ ಮಾತುಕತೆ ವಿಫಲ

Update: 2021-06-22 18:03 GMT

ಗಾಝಾ, ಜೂ.22: ಗಾಝಾ ಪಟ್ಟಿಯಲ್ಲಿನ ಮಾನವೀಯ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆ-ಹಮಾಸ್ ಮಧ್ಯೆ ನಡೆದ ಮಾತುಕತೆ ವಿಫಲವಾಗಿದೆ ಎಂದು ಹಮಾಸ್ ಮುಖಂಡ ಹೇಳಿರುವುದಾಗಿ ವರದಿಯಾಗಿದೆ. 

ಇದೊಂದು ಅತ್ಯಂತ ಕೆಟ್ಟ ಸಭೆಯಾಗಿತ್ತು ಮತ್ತು ಸಂಪೂರ್ಣ ನಕಾರಾತ್ಮಕವಾಗಿತ್ತು ಎಂದು ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ. ಸಭೆ ಸಮಗ್ರವಾಗಿತ್ತು ಮತ್ತು ನಮ್ಮ ಮಾತನ್ನು ಅವರು ಆಲಿಸಿದರು. ಆದರೆ ದುರದೃಷ್ಟವಶಾತ್, ಗಾಝಾ ಪಟ್ಟಿಯಲ್ಲಿನ ಮಾನವೀಯ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಯಾವ ಲಕ್ಷಣವೂ ಸಭೆಯಲ್ಲಿ ವ್ಯಕ್ತವಾಗಿಲ್ಲ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. 

ಗಾಝಾ ಪಟ್ಟಿಯಲ್ಲಿನ ಮಾನವೀಯ ಬಿಕ್ಕಟ್ಟು ಪರಿಹಾರಕ್ಕೆ ಸಂಬಂಧಿಸಿ ಇಸ್ರೇಲ್ ಆಡಳಿತ ಹಮಾಸ್ ಸಹಿತ ಪೆಲೆಸ್ತೀನ್ ಗುಂಪನ್ನು ಬ್ಲ್ಯಾಕ್ಮೇಲ್ ಮಾಡುತ್ತಿದೆ ಎಂದು ಸಿನ್ವರ್ ಆರೋಪಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ವಿಶ್ವಸಂಸ್ಥೆಯ ಹಿರಿಯ ಸದಸ್ಯರ ನಿಯೋಗದಲ್ಲಿ ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಯ ವಿಶ್ವಸಂಸ್ಥೆಯ ವಿಶೇಷ ಸಂಯೋಜಕ ಟಾರ್ ವೆನೆಸ್ಲ್ಯಾಂಡ್ ಅವರೂ ಇದ್ದರು. ಇಸ್ರೇಲ್-ಹಮಾಸ್ ಮಧ್ಯೆ 11 ದಿನ ನಡೆದ ಸಂಘರ್ಷದ ಬಳಿಕ ಮೇ 21ರಂದು ಕದನ ವಿರಾಮಕ್ಕೆ ಉಭಯ ಪಕ್ಷಗಳೂ ಒಪ್ಪಿವೆ. 

ಸಂಘರ್ಷದ ಸಂದರ್ಭ ಗಾಝಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 66 ಮಕ್ಕಳ ಸಹಿತ ಕನಿಷ್ಟ 257 ಪೆಲೆಸ್ತೀನ್ ಪ್ರಜೆಗಳು ಮೃತರಾಗಿದ್ದರೆ, ಹಮಾಸ್ ದಾಳಿಯಲ್ಲಿ ಇಸ್ರೇಲ್ನಲ್ಲಿ 2 ಮಕ್ಕಳ ಸಹಿತ 13 ಪ್ರಜೆಗಳು ಮೃತರಾಗಿದ್ದಾರೆ. ಗಾಝಾಪಟ್ಟಿಯಲ್ಲಿನ 1,148 ಮನೆಗಳು ಹಾಗೂ ವಾಣಿಜ್ಯ ಸಂಕೀರ್ಣ ಸಂಪೂರ್ಣ ನಾಶವಾಗಿದ್ದರೆ 15,000 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1 ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿ ವಿಶ್ವಸಂಸ್ಥೆ ನಡೆಸುವ ಶಾಲೆ ಹಾಗೂ ಇತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ.

ಗಾಝಾ ಪಟ್ಟಿಯಲ್ಲಿ ವೇತನ ಪಾವತಿಸಲು ಖತರ್ 30 ಮಿಲಿಯನ್ ಡಾಲರ್ ನಿಧಿಯನ್ನು ನೀಡುವುದಾಗಿ ಘೋಷಿಸಿದೆ. ಆದರೆ ಇದನ್ನು ವರ್ಗಾಯಿಸಲು ಇಸ್ರೇಲ್ ತಡೆಯೊಡ್ಡಿದರೆ ಪ್ರಕ್ಷುಬ್ಧತೆ ವೃದ್ಧಿಯಾಗಲಿದೆ ಎಂದು ಸಿನ್ವರ್ ಬೆದರಿಕೆ ಒಡ್ಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಗಾಝಾದಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಗೆ ವಿದ್ಯುತ್ ಸ್ಥಾವರಗಳಿಗೆ ತೈಲ ಖರೀದಿಸಲು, ಸರಕಾರಿ ಉದ್ಯೋಗಿಗಳ ವೇತನ ಪಾವತಿಗೆ ಹಾಗೂ ಸಾವಿರಾರು ಬಡಕುಟುಂಬಗಳಿಗೆ ನೆರವಾಗಲು ಖತರ್ ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಮಿಲಿಯನ್ ಡಾಲರ್ ಹಣ ನೀಡಿದೆ. ಗಲ್ಫ್ ದೇಶಗಳು 2012ರಿಂದ ಗಾಝಾದಲ್ಲಿ ಸುಮಾರು 1.4 ಬಿಲಿಯನ್ ಡಾಲರ್ಗಳಷ್ಟು ಹಣವನ್ನು ಹೂಡಿಕೆ ಮಾಡಿವೆ ಎಂದು ಖತರ್ ನ ವಿದೇಶ ವ್ಯವಹಾರ ಸಚಿವರು ಇತ್ತೀಚೆಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News