ತಮಿಳುನಾಡು: ಸ್ಥಳೀಯಾಡಳಿತ ಚುನಾವಣೆ ವಿಳಂಬ; ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

Update: 2021-06-22 18:11 GMT

ಹೊಸದಿಲ್ಲಿ, ಜೂ. 22: ಒಂಬತ್ತು ಹೊಸ ಜಿಲ್ಲೆಗಳಲ್ಲಿ ಸ್ಥಳೀಯಾಡಳಿತ ಚುನಾವಣೆ ವಿಳಂಬದ ಕುರಿತು ಸುಪ್ರೀಂ ಕೋರ್ಟ್ ತಮಿಳುನಾಡು ರಾಜ್ಯ ಚುನಾವಣಾ ಆಯೋಗವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಈ ಜಿಲ್ಲೆಗಳಲ್ಲಿ ಸುಮಾರು ಎರಡು ವರ್ಷಗಳಿಂದ ಸ್ಥಳೀಯಾಡಳಿತ ಚುನಾವಣೆ ನಡೆಸಿಲ್ಲ. ಚುನಾವಣಾ ಆಯೋಗಕ್ಕೆ ಸೆಪ್ಟಂಬರ್ 15ರ ವರೆಗೆ ಗಡು ನೀಡಲಾಗಿತ್ತು. ಎಲ್ಲಾ ವಿಷಯದಲ್ಲೂ ಕ್ಷಮೆ ಕೋರಲು ಕೋವಿಡ್ ಉತ್ತಮ ಕಾರಣವಾಗಿದೆ ಎಂದು ನ್ಯಾಯಾಲಯ ಹೇಳಿದೆ. 

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಪಿ.ಎಸ್. ನರಸಿಂಹ, ದೇಶದಲ್ಲೇ ತಮಿಳುನಾಡಿನಲ್ಲಿ ಅತ್ಯಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಹೊಸತಾಗಿ ರೂಪಿಸಲಾದ 9 ಜಿಲ್ಲೆಗಳ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಾಗಿದೆ ಎಂದರು. ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ಇಬ್ಬರು ಸದಸ್ಯರ ನ್ಯಾಯಪೀಠ, ‘‘ಎಲ್ಲಾ ವಿಷಯದಲ್ಲೂ ಕ್ಷಮೆ ಕೋರಲು ಕೋವಿಡ್ ಉತ್ತಮ ಕಾರಣವಾಗಿದೆ’’ ಎಂದರು. 

ಚುನಾವಣಾ ಆಯೋಗದಿಂದ ಇವಿಎಂಗಳನ್ನು ತರಬೇಕಾಗಿದೆ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಾಡಿಲ್ಲ. ಆದುದರಿಂದ ಇನ್ನಷ್ಟು ಸಮಯಾವಕಾಶದ ಅಗತ್ಯತೆ ಇದೆ ಎಂದು ರಾಜ್ಯ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿತು. ಸುಪ್ರೀಂ ಕೋರ್ಟ್ ಅಂತಿಮವಾಗಿ, ‘‘ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಾವು ನಿಮೆಗೆ ಸೆಪ್ಟಂಬರ್ 15ರ ವರೆಗೆ ಕಾಲಾವಕಾಶ ನೀಡುತ್ತೇವೆ. ಇದು ಕೇವಲ 9 ಜಿಲ್ಲ್ಲೆಗಳ ಚುನಾವಣೆ. ಒಂದು ವೇಳೆ ಚುನಾವಣೆ ನಡೆಸದೇ ಇದ್ದರೆ, ರಾಜ್ಯ ಚುನಾವಣಾ ಆಯೋಗದ ವಿರುದ್ಧ ನಾವು ನ್ಯಾಯಾಂಗ ನಿಂದನೆ ಉಪಕ್ರಮ ಆರಂಭಿಸಲಿದ್ದೇವೆ’’ ಎಂದಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News