ನಕಲಿ ಲಸಿಕೀಕರಣ ಅಭಿಯಾನದ ವಿರುದ್ಧ ತುರ್ತು ಕ್ರಮ: ಮಹಾರಾಷ್ಟ್ರಕ್ಕೆ ಹೈಕೋರ್ಟ್ ಸೂಚನೆ

Update: 2021-06-22 18:16 GMT

ಮುಂಬೈ, ಜೂ.22: ನಕಲಿ ಅಥವಾ ಸುಳ್ಳು ಲಸಿಕೀಕರಣ ಅಭಿಯಾನದ ಪ್ರಕರಣಗಳನ್ನು ನಿವಾರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಮಹಾರಾಷ್ಟ್ರ ಸರಕಾರ ಹಾಗೂ ಬೃಹನ್ಮುಂಬಯಿ ನಗರಪಾಲಿಕೆಗೆ ಸೂಚಿಸಿದೆ.

ಮುಂಬೈಯ ಕಾಂಡಿವಿಲಿ ಪ್ರದೇಶದ ಹೌಸಿಂಗ್ ಸೊಸೈಟಿ ಆಯೋಜಿಸಿದ್ದ ಕೋವಿಡ್ ಸೋಂಕಿನ ವಿರುದ್ಧದ ಲಸಿಕೀಕರಣ ಶಿಬಿರದಲ್ಲಿ ಪಾಲ್ಗೊಂಡವರಿಗೆ ನಕಲಿ ಲಸಿಕೆ ನೀಡಲಾಗಿದೆ ಎಂಬ ವರದಿಯನ್ನು ಸ್ವಯಂ ಗಮನಿಸಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಜಿಎಸ್ ಕುಲ್ಕರ್ಣಿ ಅವರಿದ್ದ ನ್ಯಾಯಪೀಠ, ಖಾಸಗಿಯಾಗಿ ಆಯೋಜಿಸಲಾಗುವ ಲಸಿಕೀಕರಣ ಶಿಬಿರದಲ್ಲಿ ನಗರಪಾಲಿಕೆ ಅಧಿಕಾರಿಗಳೂ ಪಾಲ್ಗೊಳ್ಳಬೇಕು ಅಥವಾ ಶಿಬಿರದ ಬಗ್ಗೆ ಮಾಹಿತಿ ಪಡೆದಿರಬೇಕು. ಜನರಿಗೆ ತೊಂದರೆಯಾಗಬಾರದು ಎಂದು ಹೇಳಿತು. 

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆಯ ಪ್ರಗತಿ ವರದಿಯನ್ನು ಜೂನ್ 24ರೊಳಗೆ ಸಲ್ಲಿಸಬೇಕು ಎಂದು ಆದೇಶಿಸಿತು. ಯಾವುದಕ್ಕೂ ಒಂದು ಕಾರ್ಯನೀತಿ ಇರಬೇಕು. ಇಂತಹ ಶಿಬಿರಗಳ ಬಗ್ಗೆ ಮಾಹಿತಿಯಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತಿರಲಿಲ್ಲ. ಇಡೀ ಮಾನವಕುಲವೇ ತೊಂದರೆಯಲ್ಲಿರುವಾಗ ಕೆಲವರು ಈ ರೀತಿಯ ವಂಚನೆಯ ಆಟವಾಡುತ್ತಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಅಧಿಕಾರಿಗಳು ಇಂತಹ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ತೋರಬಾರದು. ವಂಚಕರ ವಿರುದ್ಧ ಸಾಂಕ್ರಾಮಿಕ ದುರಂತ ಕಾಯ್ದೆ ಅಥವಾ ವಿಪತ್ತು ನಿರ್ವಹಣಾ ಕಾಯ್ದೆಯ ಕಠಿಣ ಸೆಕ್ಷನ್ನಡಿ ಪ್ರಕರಣ ದಾಖಲಿಸಬೇಕು. ತನಿಖೆ ವಿಳಂಬವಾಗಿ ಸಾಗಬಾರದು ಎಂದು ನ್ಯಾಯಪೀಠ ಸೂಚಿಸಿದೆ. 

ಲಸಿಕೆ ಪಡೆಯುವಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನ್ಯಾಯವಾದಿ ಅನಿತಾ ಶೇಖರ್ ಕ್ಯಾಸ್ತೆಲಿನೋ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಸಂದರ್ಭ ಹೌಸಿಂಗ್ ಸೊಸೈಟಿಯ ಪ್ರಕರಣವನ್ನೂ ನ್ಯಾಯಾಲಯ ಗಮನಿಸಿತು. ಬೊರಿವಲಿಯ ಹೌಸಿಂಗ್ ಸೊಸೈಟಿಯಲ್ಲಿ ಮತ್ತು ಮುಂಬೈಯ ಪಶ್ಚಿಮ ಉಪನಗರದಲ್ಲಿ ಸಿನೆಮ ನಿರ್ಮಾಣ ಸಂಸ್ಥೆಯ ಆಶ್ರಯದಲ್ಲೂ ಈ ರೀತಿಯ ನಕಲಿ ಲಸಿಕೀಕರಣ ಪ್ರಕರಣ ನಡೆದಿದೆ ಎಂದು ಅನಿತಾ ಉಲ್ಲೇಖಿಸಿದ್ದರು.

ಕಾಂಡಿವಲಿ ಪ್ರಕರಣದಲ್ಲಿ 5 ಆರೋಪಿಗಳನ್ನು ಗುರುತಿಸಲಾಗಿದ್ದು ನಾಲ್ವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಯಾದ ವೈದ್ಯರು ತಲೆಮರೆಸಿಕೊಂಡಿದ್ದಾರೆ ಎಂದು ರಾಜ್ಯ ಸರಕಾರದ ಪ್ರತಿನಿಧಿ ದೀಪಕ್ ಠಾಕ್ರೆ ಹೇಳಿದರು. ಎಲ್ಲಾ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜೂನ್ 24ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News