ಅರಬ್ ಮತ್ತು ಮುಸ್ಲಿಮ್ ಬಾಹುಳ್ಯದ ದೇಶಗಳೇಕೆ ನಿಷ್ಕ್ರಿಯವಾಗಿವೆ?

Update: 2021-07-07 05:24 GMT

                                                                                  ► ಭಾಗ-20

ಫೆಲೆಸ್ತೀನ್ ಮತ್ತದರ ಸುತ್ತಮುತ್ತ ಏನು ನಡೆಯುತ್ತಿದೆ ಎಂದು ಅರಿಯಲು ಹೊರಟವರು ಕೆಲವು ಪ್ರಶ್ನೆಗಳನ್ನು ಖಂಡಿತ ಕೇಳುತ್ತಾರೆ:

 1. ಫೆಲೆಸ್ತೀನ್ ಎಂಬುದು ಮೂಲತಃ ಅರಬ್ ಹಾಗೂ ಮುಸ್ಲಿಮ್ ಬಾಹುಳ್ಯವಿರುವ ದೇಶ. ಅಂತಹ ದೇಶವನ್ನು ಯಾರೋ ಹೊರಗಿನವರು ಆಕ್ರಮಿಸಿ, ಅದರ ನಾಗರಿಕರನ್ನೆಲ್ಲಾ ದಾಸ್ಯಕ್ಕೆ ತಳ್ಳಿ, ಅವರ ವಿರುದ್ಧ ಸಾಮೂಹಿಕ ಹತ್ಯಾಕಾಂಡ ಸಹಿತ ವಿವಿಧ ಬಗೆಯ ದೌರ್ಜನ್ಯಗಳನ್ನು ನಡೆಸುತ್ತಿರುವಾಗ, ಅದನ್ನು ತಡೆಯುವುದಕ್ಕೆ ಫೆಲೆಸ್ತೀನ್‌ನ ಹಿತೈಷಿಗಳು ಯಾರೂ ಆ ಪ್ರದೇಶದಲ್ಲಿ ಇಲ್ಲವೇ? ಆ ಪ್ರದೇಶದಲ್ಲಿ ಅಷ್ಟೊಂದು ಸಂಖ್ಯೆಯಲ್ಲಿರುವ ಶ್ರೀಮಂತ ಹಾಗೂ ಬಲಿಷ್ಠ ಅರಬ್ ದೇಶಗಳು ಹಾಗೂ ಮುಸ್ಲಿಮ್ ಸರಕಾರಗಳೆಲ್ಲಾ ಏನು ಮಾಡುತ್ತಿವೆ?

2. ಅಮೆರಿಕ, ಮಧ್ಯ ಪ್ರಾಚ್ಯದಲ್ಲಿರುವ ಇತರೆಲ್ಲ ದೇಶಗಳನ್ನು ಬಿಟ್ಟು, ಸ್ವತಃ ತನ್ನ ಹಿತಾಸಕ್ತಿಗಳನ್ನು ಅಪಾಯಕ್ಕೊಡ್ಡಿ ಇಸ್ರೇಲ್ ಅನ್ನು ಬೆಂಬಲಿಸುವುದೇಕೇ?

3. ಫೆಲೆಸ್ತೀನ್ ನಾಗರಿಕರಿಗೆ ಎಂದಾದರೂ ನ್ಯಾಯ ಸಿಗುವ ಸಾಧ್ಯತೆ ಇದೆಯೇ?

ನಾವು ಈ ಪೈಕಿ ಮೊದಲ ಪ್ರಶ್ನೆಯನ್ನೇ ಮೊದಲು ಕೈಗೆತ್ತಿಕೊಳ್ಳುವುದಾದರೆ, ಅದರ ಉತ್ತರ ತೀರಾ ನಿರಾಶಾದಾಯಕವಾಗಿದೆ. ಕೊಲ್ಲಿಯ ಪ್ರತಿಯೊಂದು ದೇಶದಲ್ಲೂ ಜನಸಾಮಾನ್ಯರಿಗೆ ಫೆಲೆಸ್ತೀನ್ ಜೊತೆ ಬಹಳ ಗಾಢವಾದ, ಭಾವನಾತ್ಮಕ ಸಂಬಂಧವಿದೆ. ಫೆಲೆಸ್ತೀನಿಗಳ ಹಕ್ಕುಗಳು ಮತ್ತು ಅವರ ವಿಮೋಚನಾ ಹೋರಾಟದ ಬಗ್ಗೆ ಜನರಿಗೆ ಗಂಭೀರ ಕಾಳಜಿ ಇದೆ. ಆದರೆ ಸಮಸ್ಯೆ ಏನೆಂದರೆ ಈ ಪ್ರದೇಶದ ಎಲ್ಲ ದೇಶಗಳಲ್ಲೂ ಜನತೆ ಮತ್ತು ಸರಕಾರದ ನಡುವೆ ಅಗಾಧ ಅಂತರವಿದೆ. ಇಲ್ಲಿ ಯಾವ ಸರಕಾರ ಕೂಡಾ ತನ್ನ ನಾಡಿನ ಜನತೆಯನ್ನು ಪ್ರತಿನಿಧಿಸುವುದಿಲ್ಲ. ಯಾವುದೇ ಸರಕಾರದ ಧೋರಣೆಗಳು ಅಲ್ಲಿನ ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುವುದಿಲ್ಲ.

► ಕೆಲವು ನಿರಾಶಾದಾಯಕ ಅಂಶಗಳು

ಜಗತ್ತಿನ ಯಾವುದೇ ಅರಬ್ ಅಥವಾ ಮುಸ್ಲಿಮ್ ಸರಕಾರವು ನಿಕಟ ಭವಿಷ್ಯದಲ್ಲಿ ಫೆಲೆಸ್ತೀನ್‌ನ ನಾಗರಿಕರ ಹಿತಕ್ಕಾಗಿ ಇಸ್ರೇಲ್ ಅಥವಾ ಅಮೆರಿಕದ ವಿರುದ್ಧ ಘರ್ಷಣೆಗೆ ಇಳಿಯುವ ಸಾಧ್ಯತೆ ಖಂಡಿತ ಇಲ್ಲ. ಏಕೆಂದರೆ ಸದ್ಯ ಹೆಚ್ಚಿನ ಮುಸ್ಲಿಮ್, ಅರಬ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಈ ಕೆಳಗಿನ ಕೆಲವು ನಿರಾಶಾದಾಯಕ ಅಂಶಗಳು ಸಮಾನವಾಗಿ ಕಂಡು ಬರುತ್ತಿವೆ:

1. ಪಶ್ಚಿಮದ ಹೆಚ್ಚಿನ ದೇಶಗಳಲ್ಲಿ ಕಳೆದ ಶತಮಾನದಲ್ಲೇ ರಾಜಾಳ್ವಿಕೆ ಮತ್ತು ಮಿಲಿಟರಿ ಆಡಳಿತಗಳು ಕೊನೆಗೊಂಡಿದ್ದರೂ ಏಶ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದ ದೇಶಗಳಲ್ಲಿ ಈಗಲೂ ಎಲ್ಲೆಂದರಲ್ಲಿ ರಾಜಾಳ್ವಿಕೆ, ಮಿಲಿಟರಿ ಆಧಿಪತ್ಯ ಮತ್ತು ಸರ್ವಾಧಿಕಾರಗಳೇ ಮೆರೆಯುತ್ತಿವೆ. ಇಲ್ಲಿ ತಲೆ ಎತ್ತಿದ ಎಲ್ಲ ಪ್ರಜಾಸತ್ತಾತ್ಮಕ ಆಂದೋಲನಗಳನ್ನು ಬಹಳ ಅಮಾನುಷವಾಗಿ ಹೊಸಕಿ ಹಾಕಲಾಗಿದೆ. ಯಾರಾದರೂ ಇಲ್ಲಿ ಪ್ರಜಾಪ್ರಭುತ್ವದ ಪರವಾಗಿ ಮಾತನಾಡಿದರೆ ಸಾಕು, ಅವರೂ ಅವರಿಗೆ ಬೇಕಾದವರೆಲ್ಲರೂ ಶಾಶ್ವತವಾಗಿ ಕಣ್ಮರೆಯಾಗಿ ಬಿಡುತ್ತಾರೆ. ಕೊಲ್ಲಿಯ ಹೆಚ್ಚಿನೆಲ್ಲ ಅರಬ್ ಮತ್ತು ಮುಸ್ಲಿಮ್ ದೇಶಗಳಲ್ಲಿ ಅಧಿಕಾರವು ಯಾವುದಾದರೂ ರಾಜ ಮನೆತನದವರ, ಮಿಲಿಟರಿ ಆಡಳಿತಗಾರರ ಅಥವಾ ಶಕ್ತಿಶಾಲಿ ವ್ಯಕ್ತಿಗಳ ಮುಷ್ಟಿಯಲ್ಲಿ ಇರುತ್ತದೆ. ಯಾರ ಮುಷ್ಟಿಯಲ್ಲಿದ್ದರೂ ಪರಿಣಾಮ ಒಂದೇ-ಅಲ್ಲಿ ಕ್ರೂರವಾದ, ನಿರಂಕುಶ ಸರ್ವಾಧಿಕಾರ ಮೊೆಯುತ್ತಿರುತ್ತದೆ.

2. ಸರ್ವಾಧಿಕಾರಿ ಸರಕಾರಗಳು ಎಂದೂ ತಮ್ಮ ಜನತೆಯ ಹಿತೈಷಿ ಗಳಾಗಿರುವುದಿಲ್ಲ. ಅವು ತಮ್ಮ ದೇಶದ ಜನಸಾಮಾನ್ಯರನ್ನೇ ತಮ್ಮ ನಂಬರ್ 1 ಶತ್ರುವೆಂದು ಪರಿಗಣಿಸುತ್ತವೆ. ತಮ್ಮ ಜನತೆಯನ್ನು ಹದ್ದು ಬಸ್ತಿನಲ್ಲಿಡುವುದೇ ಅವರ ಪ್ರಥಮ ಗುರಿಯಾಗಿರುತ್ತದೆ. ಪ್ರಜಾಪ್ರಭುತ್ವ, ಮಾನವೀಯ ಹಕ್ಕುಗಳು, ಸ್ವತಂತ್ರ ನ್ಯಾಯಾಂಗ, ಅಲ್ಪ ಸಂಖ್ಯಾತರ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ, ಮಾಧ್ಯಮ ಸ್ವಾತಂತ್ರ, ಪಾರದರ್ಶಕ ಆಡಳಿತ ಮುಂತಾದ ಯಾವ ವಿಷಯ ಕೂಡಾ ತಮ್ಮ ದೇಶದೊಳಗೆ ಚರ್ಚೆಗೆ ಬರದಂತೆ ತಡೆಯುವುದು ಆ ಸರಕಾರಗಳ ಆದ್ಯತೆಯಾಗಿರುತ್ತದೆ. ತಮ್ಮ ಆಧಿಪತ್ಯವನ್ನು ಪ್ರಶ್ನಿಸಬಹುದಾದವರು ಯಾರೂ ಎಲ್ಲೂ ತಲೆ ಎತ್ತದಂತೆ, ಎಲ್ಲೂ ಚರ್ಚೆ, ಸಮಾಲೋಚನೆಗಳನ್ನು ಕೂಡಾ ನಡೆಸದಂತೆ ನೋಡಿಕೊಳ್ಳುವುದು ಅವರ ಪ್ರಾಶಸ್ತ್ಯವಾಗಿರುತ್ತದೆ. ಆ ಸರಕಾರಗಳ ಶಕ್ತಿ ಸಾಮರ್ಥ್ಯಗಳೆಲ್ಲಾ ಸ್ವತಃ ತಮ್ಮ ಜನತೆಯನ್ನು ನಿಯಂತ್ರಿಸುವುದಕ್ಕೇ ವ್ಯಯವಾಗುತ್ತಿರುತ್ತವೆ.

3. ಆಂತರಿಕವಾಗಿ ಈ ದೇಶಗಳ ಆಡಳಿತಗಾರರು, ಎಂದಾದರೂ ತಮ್ಮ ಪಟ್ಟಕ್ಕೆ ಸವಾಲಾಗಬಲ್ಲ ತಮ್ಮದೇ ದೇಶದೊಳಗಿನ ಯಾವುದಾದರೂ ಪಕ್ಷ, ಪಂಗಡ, ಸಂಸ್ಥೆ, ವಿದ್ವಾಂಸರು, ಪತ್ರಕರ್ತರು ಅಥವಾ ಬುದ್ಧಿಜೀವಿಗಳನ್ನು ತಮ್ಮ ಅತಿದೊಡ್ಡ ಶತ್ರುವೆಂದು ಪರಿಗಣಿಸಿ ಅವರ ಸದ್ದು ಅಡಗಿಸುವ ಶ್ರಮದಲ್ಲೇ ಸದಾ ತಲ್ಲೀನರಾಗಿರುತ್ತಾರೆ. ದುರಂತವೇನೆಂದರೆ, ಚೀನಾದಲ್ಲಿ ಪ್ರಜಾಸತ್ತೆ ಯಾಕಿಲ್ಲ? ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳಿಗೆ ಮಾನ್ಯತೆ ಯಾಕಿಲ್ಲ ಎಂದು ಪ್ರಶ್ನಿಸುವ ಅಮೆರಿಕ ಮತ್ತು ಯುರೋಪಿನ ಪ್ರಜಾಸತ್ತಾತ್ಮಕ ಸರಕಾರಗಳು ಅರಬ್ ದೇಶಗಳಲ್ಲಿ ಸರ್ವಾಧಿಕಾರಿಗಳನ್ನು ರಕ್ಷಿಸಲು ಮತ್ತು ಪ್ರಜಾಸತ್ತೆ, ಮಾನವಹಕ್ಕು ಇತ್ಯಾದಿಗಳ ಕೊರಳು ಕತ್ತರಿಸಲು, ಮಾಡಬಾರದ ಎಲ್ಲ ಅಪರಾಧಗಳನ್ನೂ ಮಾಡಿವೆ.

4. ವಿದೇಶ ನೀತಿಯ ವಿಷಯದಲ್ಲಿ ಈ ದೇಶಗಳ ಮಿತ್ರರು ಯಾರು, ಶತ್ರುಗಳು ಯಾರು ಎಂಬುದೆಲ್ಲ ಯಾವುದೇ ತತ್ವ ಸಿದ್ಧಾಂತ, ಧೋರಣೆ ಅಥವಾ ಮೌಲ್ಯದ ಆಧಾರದಲ್ಲಿ ನಿರ್ಧಾರವಾಗುವ ಬದಲು ಕೇವಲ ಆಯಾ ಸರಕಾರದ ತಕ್ಷಣದ ಹಿತಾಸಕ್ತಿಗಳನ್ನು ಅಥವಾ ಆ ಸರಕಾರಗಳನ್ನು ನಿಯಂತ್ರಿಸುವ ಅಮೆರಿಕದಂತಹ ಪೋಷಕ ರಾಷ್ಟ್ರದ ಮರ್ಜಿಯನ್ನು ಅವಲಂಬಿಸಿರುತ್ತದೆ. ಶೀತಲ ಸಮರದ ಯುಗದಲ್ಲಿ ಕೊಲ್ಲಿಯ ಹೆಚ್ಚಿನ ಸರ್ವಾಧಿಕಾರಿ ಸರಕಾರಗಳು ಒಂದೋ ಅಮೆರಿಕ ಅಥವಾ ಸೋವಿಯತ್ ಕಡೆಗೆ ವಾಲಿರುತ್ತಿದ್ದವು. ಸಂದರ್ಭಾನುಸಾರ ನಿಷ್ಠಾಂತ ರಕ್ಕೂ ಅವಕಾಶವಿತ್ತು. ಆದರೆ ಆನಂತರದ ಯುಗದಲ್ಲಿ ಹೆಚ್ಚಿನ ದೇಶಗಳನ್ನು ಏಕಪಕ್ಷೀಯವಾಗಿ ಅಮೆರಿಕವೇ ನಿಯಂತ್ರಿಸುತ್ತಾ ಬಂದಿದೆ. ನಾವು ಒಂದು ನಿರ್ದಿಷ್ಟ ಸರಕಾರದ್ದು ಎಂದು ನಂಬುವ ಧೋರಣೆಗಳೆಲ್ಲಾ ನಿಜವಾಗಿ ಅಮೆರಿಕ ನಿರ್ದೇಶಿತ ಧೋರಣೆಗಳಾಗಿರುತ್ತವೆ.

 5. ಹೆಚ್ಚಿನೆಲ್ಲ ಅರಬ್ ಅಥವಾ ಮುಸ್ಲಿಮ್ ಸರಕಾರಗಳು ತಮ್ಮ ಅಕ್ಕಪಕ್ಕದ ಯಾವುದಾದರೂ ಮುಸ್ಲಿಮ್ ಅಥವಾ ಅರಬ್ ದೇಶವನ್ನೇ ತಮ್ಮ ಪರಮ ಶತ್ರು ಎಂದು ಪರಿಗಣಿಸಿರುತ್ತವೆ ಮತ್ತು ಸದಾ ಅದರ ವಿರುದ್ಧ ಸಮರ ಸನ್ನದ್ಧತೆಯಲ್ಲಿ ನಿರತವಾಗಿರುತ್ತವೆ. ಫೆಲೆಸ್ತೀನ್‌ನ ಜನತೆಗೆ ನೆರವಾಗಲು ಬಯಸುವ ಯಾವುದೇ ಸರಕಾರವು ಇಸ್ರೇಲ್ ಎಂಬ ಬಲಿಷ್ಠ ಸರಕಾರದ ವಿರುದ್ಧ ಮಾತ್ರವಲ್ಲ ಅಮೆರಿಕವೆಂಬ ಅದರ ಪೋಷಕ ಸರಕಾರದ ವಿರುದ್ಧ ಕೂಡಾ ಘರ್ಷಣೆಗೆ ಇಳಿಯಬೇಕಾಗುತ್ತದೆ. ಆದರೆ ಮಧ್ಯ ಪ್ರಾಚ್ಯದಲ್ಲಿ ಮಾತ್ರವಲ್ಲ, ಸಂಪೂರ್ಣ ಏಶಿಯಾ ಖಂಡದಲ್ಲೂ ಯಾವುದೇ ದೇಶ ಅಂತಹ ಸಾಹಸಕ್ಕೆ ಇಳಿಯುವ ಸಾಧ್ಯತೆ ದೂರದೂರಕ್ಕೂ ಕಾಣಿಸುತ್ತಿಲ್ಲ.
   
ನೆಲೆ ಒದಗಿಸುವ ಔದಾರ್ಯ

ಸಾಮಾನ್ಯವಾಗಿ ಯಾವುದೇ ಸ್ವತಂತ್ರ ದೇಶ ತನ್ನ ನೆಲದಲ್ಲಿ, ಇನ್ನೊಂದು ದೇಶಕ್ಕೆ ತನ್ನ ಸೇನಾ ನೆಲೆಯನ್ನು ಸ್ಥಾಪಿಸಲು ಅನುಮತಿಸುವುದಿಲ್ಲ - ಅದೆಷ್ಟೇ ಆಪ್ತ ದೇಶವಾಗಿದ್ದರೂ ಸರಿಯೇ. ತೀರಾ ಅನಿವಾರ್ಯ ಸನ್ನಿವೇಶದಲ್ಲಿ ತನ್ನ ಪರಮ ಆಪ್ತ ಹಾಗೂ ತನ್ನ ರಕ್ಷಕ ಎಂದು ನಂಬಲಾಗುವ ದೇಶಕ್ಕೆ ಮಾತ್ರ ಸೇನಾ ನೆಲೆಗಳನ್ನು ಸ್ಥಾಪಿಸಲು ಅನುಮತಿಸಲಾಗುತ್ತದೆ. ಈ ದೃಷ್ಟಿಯಿಂದ ನಾವು, ಯಾವ ದೇಶದಲ್ಲಿ ಯಾವ ದೇಶಕ್ಕೆ ಸೇನಾ ನೆಲೆಗಳನ್ನು ಒದಗಿಸಲಾಗಿದೆ ಎಂಬ ಆಧಾರದಲ್ಲಿ, ಯಾರು ತಮ್ಮ ಭದ್ರತೆಗಾಗಿ ಯಾರನ್ನು ಅವಲಂಬಿಸಿದ್ದಾರೆ ಎಂಬುದನ್ನು ನಿರ್ಧರಿಸಬಹುದು. ಇಸ್ರೇಲ್‌ನೊಳಗೆ ಅಮೆರಿಕದ ಪ್ರಥಮ ಸೈನಿಕ ನೆಲೆ 2017 ರಲ್ಲಿ ಸ್ಥಾಪಿತವಾಯಿತು. ಇರಾನ್ ಕಡೆಯಿಂದ ನಡೆಯಬಹುದಾದ ಸಂಭವನೀಯ ಬ್ಯಾಲಿಸ್ಟಿಕ್ ಮಿಸೈಲ್‌ಗಳನ್ನುತಡೆಯುವುದು ಈ ನೆಲೆಯ ಘೋಷಿತ ಉದ್ದೇಶವಾಗಿತ್ತು. ಸ್ಥಳೀಯರ ಕಡೆಯಿಂದ ಅದಕ್ಕೆ ವಿರೋಧವಿತ್ತಾದರೂ ಇರಾನ್‌ನ ಹೆಸರು ಹೇಳಿ ಪ್ರತಿರೋಧವನ್ನು ತಣಿಸಲಾಯಿತು. ಇದಕ್ಕೆ ಹೋಲಿಸಿದರೆ ಸೌದಿ ಅರೇಬಿಯಾ ಮತ್ತು ಅಮೆರಿಕದ ನಡುವೆ ರಕ್ಷಣಾ ಒಪ್ಪಂದಗಳ ಸರಣಿ 1933 ರಲ್ಲೇ ಆರಂಭವಾಗಿದ್ದು 1951 ರ ಹೊತ್ತಿಗೆ ಅಲ್ಲಿ ಅಮೆರಿಕದ ಸೇನಾ ನೆಲೆಗಳು ಸ್ಥಾಪಿತವಾಗಿದ್ದವು !

ಈಗಂತೂ ಸೌದಿ ಅರೇಬಿಯಾದಲ್ಲಿ ಅಮೆರಿಕಾದ ವಾಯು ನೆಲೆಗಳು, ನೌಕಾ ನೆಲೆಗಳು ಮತ್ತು ಮಿಲಿಟರಿ ಸ್ಥಾವರಗಳು ಹತ್ತಾರು ಸಂಖ್ಯೆಯಲ್ಲಿವೆ. ಇದು ಗಲ್ಫ್ ಕೋ ಆಪರೇಟಿವ್ ಕೌನ್ಸಿಲ್ (ಎಇಇ) ನ ಪ್ರಧಾನ ಸ್ಥಾನದಲ್ಲಿರುವ ಸೌದಿ ಅರೇಬಿಯಾದ ಕಥೆ. ಜಿಸಿಸಿ ಯ ಇತರ ಸದಸ್ಯ ದೇಶಗಳಾದ ಕುವೈತ್, ಖತರ್, ಒಮಾನ್, ಯುಎಇ ಮತ್ತು ಬಹರೈನ್ ಗಳು ಕೂಡ ಅಮೆರಿಕಾದ ಮಡಿಲಲ್ಲೇ ಆಶ್ರಯ ಪಡೆದಿವೆ. ಈ ಪೈಕಿ ಪ್ರತಿಯೊಂದು ದೇಶದಲ್ಲೂ ಅಮೆರಿಕದ ದೊಡ್ಡ ದೊಡ್ಡ ಸೇನಾ ನೆಲೆಗಳಿವೆ. ಗಮ್ಮತ್ತೇನೆಂದರೆ ಇಸ್ರೇಲ್ ನಂತೆ ಈ ದೇಶಗಳು ಕೂಡ ಇರಾನ್ ಕಡೆಯಿಂದ ನಡೆಯಬಹುದಾದ ಸಂಭವನೀಯ ದಾಳಿಯನ್ನು ತಡೆಯುವುದಕ್ಕಾಗಿ ಎಂಬ ಘೋಷಿತ ಸಬೂಬನ್ನೇ ಮುಂದಿಟ್ಟು ತಮ್ಮ ನೆಲದಲ್ಲಿ ಅಮೆರಿಕದ ಸೇನಾನೆಲೆಗಳ ಸ್ಥಾಪನೆಯನ್ನು ಸಮರ್ಥಿಸುತ್ತಿವೆ! ಇದರಿಂದ ಒಂದು ವಿಷಯವಂತೂ ಸಂಶಯಾತೀತವಾಗಿ ಸ್ಪಷ್ಟವಾಗುತ್ತದೆ. ಈ ಎಲ್ಲ ದೇಶಗಳು ತಮ್ಮ ಶತ್ರು ವೆಂದು ಪರಿಗಣಿಸುವುದು ಇರಾನ್ ದೇಶವನ್ನೇ ಹೊರತು ಇಸ್ರೇಲ್ ದೇಶವನ್ನಲ್ಲ. ಹಾಗೆಯೇ ಇರಾನ್ ಅನ್ನು ಪರಮ ಶತ್ರುವೆಂದು ಪರಿಗಣಿಸುವ ವಿಷಯದಲ್ಲಿ ಈ ಎಲ್ಲ ದೇಶಗಳು ಇಸ್ರೇಲ್ ಜೊತೆ ಒಂದೇ ಸಾಲಲ್ಲಿ ನಿಂತಿವೆ!
     
 ಜಿಸಿಸಿಯ ಸದಸ್ಯರಲ್ಲದ ಸಿರಿಯಾ ಮತ್ತು ಇರಾಕ್ ಎಂಬ ಎರಡು ಅರಬ್ ದೇಶಗಳಲ್ಲೂ, ಟರ್ಕಿ ಮತ್ತು ಅಫ್ಘಾನಿಸ್ತಾನ ಎಂಬ (ಅರಬ್ ಅಲ್ಲದ) ಎರಡು ಮುಸ್ಲಿಮ್ ದೇಶಗಳಲ್ಲೂ ಅಮೆರಿಕಾದ ಸೈನಿಕ ನೆಲೆಗಳಿವೆ. ಎಷ್ಟೋ ಮಂದಿ ಟರ್ಕಿಯನ್ನು ಇಸ್ರೇಲ್‌ನ ಪ್ರತಿಸ್ಪರ್ಧಿ ಎಂಬಂತೆ ಕಾಣುತ್ತಾರೆ. ಆದರೆ ಟರ್ಕಿ ಕೂಡ ಅಮೆರಿಕದ ಎರಡೆರಡು ವಾಯು ನೆಲೆಗಳಿಗೆ ಆಶ್ರಯವಾಗಿದೆ. ಈ ಪೈಕಿ ಹೆಚ್ಚಿನೆಲ್ಲ ದೇಶಗಳು ಬಹುಕಾಲದಿಂದ ಇಸ್ರೇಲ್ ಜೊತೆ ಗುಟ್ಟಾಗಿ ವಿವಿಧ ಬಗೆಯ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿವೆ. ವಿಶೇಷವಾಗಿ ತಮ್ಮ ದೇಶದ ಒಳಗಿನ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ನಿಯಂತ್ರಿಸಲು ಬೇಹುಗಾರಿಕೆಯ ರಂಗದಲ್ಲಿ ಇಸ್ರೇಲ್‌ನಿಂದ ಗರಿಷ್ಠ ಸಹಕಾರವನ್ನು ಪಡೆಯುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ತೆರೆಮರೆಯ ವಹಿವಾಟುಗಳು ಕಡಿಮೆಯಾಗಿ ಬಹಿರಂಗ ಒಪ್ಪಂದ - ವ್ಯವಹಾರಗಳು ಕ್ಷಿಪ್ರವಾಗಿ ಹೆಚ್ಚುತ್ತಿವೆ.

► ವಿಮೋಚಕರಿಗೆ ಬೇಕಾಗಿದೆ ವಿಮೋಚನೆ

ಕೊಲ್ಲಿಯ ಅರಬ್ ಮತ್ತು ಮುಸ್ಲಿಮ್ ದೇಶಗಳು ಸರ್ವಾಧಿಕಾರಿಗಳ ಕಪಿಮುಷ್ಟಿಯಲ್ಲಿದ್ದು ಅವು ಸ್ವತಃ ತಮ್ಮ ದೇಶದ ನಾಗರಿಕರಿಗೆ ಸ್ವಾತಂತ್ರವನ್ನಾಗಲಿ ಮೂಲಭೂತ ಹಕ್ಕುಗಳನ್ನಾಗಲಿ ನೀಡಲು ಸಿದ್ಧವಿಲ್ಲ. ಇಂತಹ ದೇಶಗಳು ಫೆಲೆಸ್ತೀನ್ ಎಂಬ ಇನ್ನೊಂದು ನಾಡಿನವರಿಗೆ ಸ್ವಾತಂತ್ರ ಕೊಡಿಸುತ್ತವೆಂದು ನಿರೀಕ್ಷಿಸುವುದು ಮೂರ್ಖತನವಲ್ಲವೇ? ಬ್ರಿಟನ್‌ನ ಖ್ಯಾತ ಸಾಪ್ತಾಹಿಕ ‘ದಿ ಇಕೊನೊಮಿಸ್ಟ್’ ನವರು ಜಗತ್ತಿನ 167 ದೇಶಗಳ ಸ್ಥಿತಿಗತಿಗಳ ವೈಜ್ಞಾನಿಕ ಅಧ್ಯಯನ ನಡೆಸಿ, ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರದ ದೃಷ್ಟಿಯಿಂದ ಯಾವ ದೇಶ ಯಾವ ಸ್ಥಿತಿಯಲ್ಲಿದೆ ಎಂದು ಅಳೆದು ಪ್ರತಿಯೊಂದು ದೇಶಕ್ಕೆ ಇಂತಿಷ್ಟು ಅಂಕ ನೀಡುತ್ತಾರೆ. ಸಾಮಾನ್ಯವಾಗಿ ನಿಷ್ಪಕ್ಷವೆಂದು ನಂಬಲಾಗುವ ಪ್ರಸ್ತುತ ಪಟ್ಟಿಯಿಂದ ತಿಳಿಯುವಂತೆ ಕೊಲ್ಲಿ ಪ್ರದೇಶದ ಹೆಚ್ಚಿನ ಮುಸ್ಲಿಮ್ ದೇಶಗಳಲ್ಲಿ ಪ್ರಜಾಸತ್ತಾತ್ಮಕ ಹಾಗೂ ನಾಗರಿಕ ಹಕ್ಕುಗಳು ತೀರಾ ಕನಿಷ್ಠ ಮಟ್ಟದಲ್ಲಿವೆ. ಅತ್ಯುತ್ತಮ ಸ್ಥಿತಿಗೆ 10 ಅಂಕವೆಂದು ನಿಗದಿ ಪಡಿಸಿ ಅಳೆದಾಗ ಟರ್ಕಿಯೊಂದನ್ನು ಬಿಟ್ಟರೆ ಬೇರಾವ ದೇಶಕ್ಕೂ 5 ಕ್ಕಿಂತ ಹೆಚ್ಚು ಅಂಕ ದೊರೆತಿಲ್ಲ. ಕುವೈತ್, ಅಲ್ಜೀರಿಯ, ಬಹರೈನ್, ಈಜಿಪ್ಟ್, ಮೊರೊಕ್ಕೋ, ಇರಾಕ್ ಮತ್ತು ಜೋರ್ಡನ್‌ಗಳಿಗೆ 3 ರಿಂದ 4 ಅಂಕಗಳು ಸಿಕ್ಕಿವೆ. ಸಿರಿಯಾ, ಯುಎಇ, ಇರಾನ್, ಒಮಾನ್ ಮತ್ತು ಖತರ್ ದೇಶಗಳಿಗೆ ಕೇವಲ 2 ರಿಂದ 3 ಅಂಕಗಳು ದೊರೆತಿವೆ. ಸೌದಿ ಅರೇಬಿಯಾ ಮತ್ತು ಲಿಬಿಯಾಗಳಿಗಂತೂ 2 ಕ್ಕಿಂತಲೂ ಕಡಿಮೆ ಅಂಕಗಳು ಸಿಕ್ಕಿವೆ. ಈ ದೃಷ್ಟಿಯಿಂದ ನೋಡಿದರೆ ಫೆಲೆಸ್ತೀನ್‌ಗಿಂತ ಹೆಚ್ಚಾಗಿ ಸ್ವತಃ ಈ ದೇಶಗಳ ಜನತೆಗೆ ಸ್ವಾತಂತ್ರ ಮತ್ತು ನಾಗರಿಕ ಹಕ್ಕುಗಳ ತುರ್ತು ಅಗತ್ಯವಿದೆ. ವಿವಿಧ ಬಗೆಯ ಮತ್ತು ವಿಭಿನ್ನ ಮಟ್ಟದ ಸರ್ವಾಧಿಕಾರಗಳ ಅಧೀನದಲ್ಲಿ ನರಳುತ್ತಿರುವ ಈ ದೇಶಗಳ ಜನತೆಯ ಆಕ್ರೋಶವನ್ನು ಬಲಪ್ರಯೋಗಿಸಿ ಎಷ್ಟು ತುಳಿದಿಟ್ಟರೂ ಅದು ಒಂದಿಲ್ಲೊಂದು ದಿನ ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಳ್ಳಲಿಕ್ಕಿದೆ. ಆ ತನಕ ಈ ಪೈಕಿ ಯಾವುದೇ ದೇಶ ಫೆಲೆಸ್ತೀನ್‌ನ ವಿಮೋಚನೆಗೆ ಯಾವುದೇ ಗಣ್ಯ ಕೊಡುಗೆ ನೀಡುವ ಸಾಧ್ಯತೆ ಖಂಡಿತ ಇಲ್ಲ.

 

(ಮುಂದುವರಿಯುದು)

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Similar News