ಕೇರಳದಲ್ಲಿ 24 ಗಂಟೆಯೊಳಗೆ 3 ವರದಕ್ಷಿಣೆ ಸಾವುಗಳು: ವ್ಯಾಪಕ ಆಕ್ರೋಶ

Update: 2021-06-23 10:13 GMT

ತಿರುವನಂತಪುರಂ : ಕಳೆದ 24 ಗಂಟೆಗಳ ಅವಧಿಯಲ್ಲಿ  ಕೇರಳದ ವಿವಿಧ ಭಾಗಗಳಲ್ಲಿ ಮೂವರು  ಮಹಿಳೆಯರು ವರದಕ್ಷಿಣೆ ಸಂಬಂಧಿ ಪ್ರಕರಣಗಳಲ್ಲಿ ಸಾವನ್ನಪ್ಪಿದ ಘಟನೆಗಳು ರಾಜ್ಯದಲ್ಲಿ ವ್ಯಾಪಕ ಆಕ್ರೋಶ ಸೃಷ್ಟಿಸಿದೆ.

ಮಂಗಳವಾರ ತಿರುವನಂತಪುರಂನ ವಿಝಿಂಜಮ್ ಎಂಬಲ್ಲಿ ಅರ್ಚನಾ ಎಂಬ 24 ವರ್ಷದ ಯುವತಿಯ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆ ತಾನು ಪ್ರೀತಿಸಿ  ವಿವಾಹವಾಗಿದ್ದ  ಸುರೇಶ್‍ನೊಂದಿಗೆ ಬಾಡಿಗೆ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದರು. ಮದುವೆಯದ ಮೂರು ತಿಂಗಳಿನಲ್ಲಿಯೇ ಸುರೇಶ್ ಸೋದರನಿಗಾಗಿ ಜಮೀನು ಖರೀದಿಸಲು ಆಕೆಯ ಮಾವ ಆಕೆಯಿಂದ ರೂ 3 ಲಕ್ಷ ವರದಕ್ಷಿಣೆಗೆ  ಬೇಡಿಕೆಯಿಟ್ಟಿದ್ದರೆನ್ನಲಾಗಿದೆ. ತನ್ನಲ್ಲಿ ಅಷ್ಟೊಂದು ಹಣವಿಲ್ಲವೆಂದು ಅರ್ಚನಾ ತಂದೆ ಕೈಚೆಲ್ಲಿದ್ದರು. ನಂತರ ಈ ವಿಚಾರ ಪ್ರಸ್ತಾಪವಾಗದೇ ಇದ್ದರೂ  ಇದು ಕುಟುಂಬದಲ್ಲಿ ಸಮಸ್ಯೆ ಸೃಷ್ಟಿಸಿತ್ತು. ನಂತರ ಅರ್ಚನಾ ಮತ್ತು ಸುರೇಶ್ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದ್ದರು.

ಅರ್ಚನಾ ಮೃತಪಟ್ಟ ದಿನ ಸುರೇಶ್ ಡೀಸೆಲ್ ಖರೀದಿಸಿದ್ದನೆನ್ನಲಾಗಿದೆ. ಆದರೆ ಇರುವೆಗಳನ್ನು ಸಾಯಿಸಲು ತಂದಿದ್ದಾಗಿ ಆತ ಹೇಳಿಕೊಂಡಿದ್ದ. ಆದರೆ ಅರ್ಚನಾ ಕುಟುಂಬ ಮಾತ್ರ ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಆಕೆಯನ್ನು ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸುತ್ತಿದೆಯಲ್ಲದೆ ಸುರೇಶ್ ಕುಡಿದು ಬಂದು ಆಕೆಗೆ ಹೊಡೆಯುತ್ತಿದ್ದ ಎಂದೂ ದೂರಿದೆ.

ಇನ್ನೊಂದು ವರದಕ್ಷಿಣೆ ಸಂಬಂಧಿ ಪ್ರಕರಣದಲ್ಲಿ ಆಯುರ್ವೇದ ಶಿಕ್ಷಣ ಪಡೆಯುತ್ತಿದ್ದ 24 ವರ್ಷದ ವಿಸ್ಮಯಾ ತನ್ನ ಪತಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತನ್ನ ಪತಿ ಕುಟುಂಬ ವರದಕ್ಷಿಣೆಗಾಗಿ ತನ್ನನ್ನು ಹಿಂಸಿಸುತ್ತಿದೆ ಎಂದು ಹೇಳಿ ಆಕೆ ಸಾಯುವ ಮುನ್ನ ಸಂಬಂಧಿಗಳಿಗೆ ವಾಟ್ಸ್ಯಾಪ್ ಸಂದೇಶಗಳನ್ನು ಕಳುಹಿಸಿದ್ದರು. ತನ್ನ  ತಂದೆ ಮದುವೆ ಸಂದರ್ಭ ವರದಕ್ಷಿಣೆಯಾಗಿ ನೀಡಿದ್ದ ಕಾರು ತನ್ನ ಗಂಡನ ಕುಟುಂಬಕ್ಕೆ ಇಷ್ಟವಾಗಿರದೇ ಇದ್ದುದರಿಂದ ಅವರು ತನಗೆ ಹೊಡೆಯುತ್ತಿದ್ದರು ಎಂದು ಆಕೆ  ಹೇಳಿದ್ದಳೆನ್ನಲಾಗಿದೆ. ಘಟನೆ ಸಂಬಂಧ ಆಕೆಯ ಪತಿ ಕಿರಣ್ ನನ್ನು ಬಂಧಿಸಲಾಗಿದೆ.

ಮೂರನೇ ಪ್ರಕರಣದಲ್ಲಿ ಮಲ್ಲಿಕುನ್ನಂ ಎಂಬಲ್ಲಿ 19 ವರ್ಷದ ಸುಚಿತ್ರಾ ತಮ್ಮ ಪತಿ ಮನೆಯಲ್ಲಿ ಶಂಕಾಸ್ಪದವಾಗಿ ಸಾವಿಗೀಡಾಗಿದ್ದಾರೆ.  ಇದೊಂದು ಆತ್ಮಹತ್ಯೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರೂ ತನಿಖೆ ನಡೆಯುತ್ತಿದೆ. ಆಕೆಯ ಪತಿ ಉತ್ತರಾಖಂಡದಲ್ಲಿ ಉದ್ಯೋಗದಲ್ಲಿದ್ದು ಆಕೆ ತನ್ನ  ಅತ್ತೆ ಮಾವನ ಜತೆಗೆ ವಾಸವಾಗಿದ್ದರು.  ಹೆಚ್ಚು ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News