ಕೇಂದ್ರ ಶಿಯಾ ವಕ್ಫ್‌ ಮಂಡಳಿ ಸದಸ್ಯ ವಸೀಂ ರಿಝ್ವಿ ವಿರುದ್ಧ ಕಾರು ಚಾಲಕನ ಪತ್ನಿಯಿಂದ ಅತ್ಯಾಚಾರ ಆರೋಪ

Update: 2021-06-23 13:15 GMT

ಲಕ್ನೋ: ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಸದಸ್ಯ ಹಾಗೂ  ಮಾಜಿ ಅಧ್ಯಕ್ಷ ವಸೀಮ್ ರಿಝ್ವಿ ವಿರುದ್ಧ ಅವರ ಚಾಲಕನ ಪತ್ನಿ ಅತ್ಯಾಚಾರದ ಆರೋಪ ಹೊರಿಸಿದ್ದಾರೆ.

ಮಂಗಳವಾರ ಹಲವಾರು ವಕೀಲರೊಂದಿಗೆ ಸದಾತ್ ಗಂಜ್ ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆ ವಸೀಮ್ ರಿಝ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಶ್ಲೀಲ ವೀಡಿಯೊ ಹಾಗೂ ಫೋಟೋಗಳ ಮೂಲಕ ರಿಝ್ವಿ ತನ್ನನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ

ಕೆಲಸ ಅಥವಾ ಬೇರೊಂದು ನೆಪದಲ್ಲಿ ವಸೀಮ್ ರಿಝ್ವಿ ತನ್ನ ಗಂಡನನ್ನು ಹೊರಗೆ ಕಳುಹಿಸುವ ಮೂಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ತಾನು ಅದಕ್ಕೆ  ವಿರೋಧಿಸಿದಾಗ, ತನ್ನ ಅಶ್ಲೀಲ ವೀಡಿಯೊಗಳು ಹಾಗೂ ಫೋಟೋಗಳನ್ನು ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದರು ಎಂದು ಮಹಿಳೆ ಸುದ್ದಿಗಾರರಿಗೆ ತಿಳಿಸಿದರು.

ತನ್ನ ಚಾಲಕ ತನ್ನ ಪ್ರತಿಸ್ಪರ್ಧಿಗಳೊಂದಿಗೆ ಸಂಪರ್ಕ ಹೊಂದಿದ್ದ ಹಾಗೂ  ನನ್ನ ಮಾಹಿತಿಯನ್ನು ಅವರಿಗೆ ತಲುಪಿಸುತ್ತಿದ್ದ. ಈ ದೃಷ್ಟಿಯಿಂದ ಹಾಗೂ  ನನ್ನ ಸುರಕ್ಷತೆಯ ದೃಷ್ಟಿಯಿಂದ ನಾನು ಕೆಲವು ದಿನಗಳ ಹಿಂದೆ ಚಾಲಕನನ್ನು ಕೆಲಸದಿಂದ ತೆಗೆದು ಹಾಕಿದ್ದೆ. ನಾನು ಅವನಿಗೆ ಕೊಟ್ಟ ಮನೆ ಕೂಡ ಖಾಲಿ ಮಾಡಿಸಿದ್ದೆ. ಈಗ ಅಂತಹ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ನನ್ನ ಘನತೆಯನ್ನು ಕೆಡಿಸಲು ಪ್ರಯತ್ನಿಸಲಾಗಿದೆ "ಎಂದು ರಿಝ್ವಿ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಕುರ್‌ ಆನ್‌ ನ ಕೆಲ ಅಧ್ಯಾಯಗಳನ್ನು ತೆರವುಗೊಳಿಸಬೇಕೆಂದು ರಿಝ್ವಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಆದರೆ ಅವರ ಅರ್ಜಿಯನ್ನು ತಳ್ಳಿ ಹಾಕಿದ ನ್ಯಾಯಾಲಯ ಅವರಿಗೆ ದಂಡ ವಿಧಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News