ಮಾನಹಾನಿ ಪ್ರಕರಣ: ಜೂ. 24 ರಂದು ಗುಜರಾತ್ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಹಾಜರಾಗುವ ಸಾಧ್ಯತೆ

Update: 2021-06-23 13:30 GMT

ಸೂರತ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಗುಜರಾತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಗುರುವಾರ ಹಾಜರಾಗುವ ನಿರೀಕ್ಷೆ ಇದ್ದು,  ಮೋದಿ ಉಪನಾಮದ ಕುರಿತಾಗಿ ತಾನು  ನೀಡಿದ್ದ ಹೇಳಿಕೆಗೆ  ಗುಜರಾತ್ ಶಾಸಕರೊಬ್ಬರು ಸಲ್ಲಿಸಿರುವ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಬಗ್ಗೆ ಅಂತಿಮ ಹೇಳಿಕೆ ದಾಖಲಿಸಲಿದ್ದಾರೆ.

ಸೂರತ್ ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ ಮಾನಹಾನಿ ಪ್ರಕರಣದಲ್ಲಿ ತಮ್ಮ ಅಂತಿಮ ಹೇಳಿಕೆಯನ್ನು ದಾಖಲಿಸಲು  ಜೂನ್ 24 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಒಂದು ವಾರದ ಹಿಂದೆ ಸೂರತ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎ.ಎನ್. ದವೆ  ಅವರು ರಾಹುಲ್ ಗಾಂಧಿಯವರಿಗೆ ನಿರ್ದೇಶನ ನೀಡಿದ್ದರು ಎಂದು ಸೂರತ್ ಕಾಂಗ್ರೆಸ್ ಕಾನೂನು ಘಟಕದ ಸದಸ್ಯ, ವಕೀಲ ಫಿರೋಝ್ ಖಾನ್ ಪಠಾಣ್ ಬುಧವಾರ ಹೇಳಿದ್ದಾರೆ.

ಮಾನಹಾನಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ 499 ಹಾಗೂ  500 ರ ಅಡಿಯಲ್ಲಿ ಪೂರ್ಣೇಶ್ ಮೋದಿ ಅವರು 2019 ರ ಎಪ್ರಿಲ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.

"ಎಲ್ಲಾ ಕಳ್ಳರ  ಸಾಮಾನ್ಯ ಉಪನಾಮ ಮೋದಿ ಆಗಿದ್ದು ಹೇಗೆ?" ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಇಡೀ ಮೋದಿ ಸಮುದಾಯವನ್ನು ದೂಷಿಸಿದ್ದಾರೆ ಎಂದು ಸೂರತ್-ಪಶ್ಚಿಮ ಕ್ಷೇತ್ರದ ಶಾಸಕರು ತಮ್ಮ ದೂರಿನಲ್ಲಿ ಆರೋಪಿಸಿದ್ದರು. 2019 ರಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ ರಾಹುಲ್ ಈ ಹೇಳಿಕೆಯನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News