ಜಮ್ಮು ವಾಯುನೆಲೆಯಲ್ಲಿ ಸ್ಪೋಟ: ವಾಯುಪಡೆ ಅಧಿಕಾರಿಗಳೊಂದಿಗೆ ರಾಜನಾಥ್ ಸಿಂಗ್ ಚರ್ಚೆ
Update: 2021-06-27 13:17 IST
ಹೊಸದಿಲ್ಲಿ: ಜಮ್ಮುವಿನಲ್ಲಿರುವ ವಾಯುನೆಲೆಯಲ್ಲಿ ರವಿವಾರ ಬೆಳಗ್ಗೆ ಸಂಭವಿಸಿರುವ ಕಡಿಮೆ ತೀವ್ರತೆಯ ಎರಡು ಸ್ಫೋಟಗಳಿಗೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎಚ್.ಎಸ್. ಅರೋರ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದರು.
ಏರ್ ಮಾರ್ಷಲ್ ವಿಕ್ರಮ್ ಸಿಂಗ್ ಅವರು ಜಮ್ಮು ತಲುಪಿದ್ದು ಪರಿಸ್ಥಿತಿ ಅವಲೋಕಿಸುವರು ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
ಈ ಸ್ಫೋಟಗಳು ಭಯೋತ್ಪಾದಕ ದಾಳಿಯ ಭಾಗವಾಗಿದೆಯೇ ಎಂಬ ಕುರಿತಾಗಿ ವಾಯುಪಡೆ ತನಿಖೆ ನಡೆಸುತ್ತಿದೆ ಎಂದು ರಕ್ಷಣಾ ಇಲಾಖೆಗೆ ನಿಕಟವಾಗಿರುವ ಮೂಲಗಳು ತಿಳಿಸಿವೆ.
ಈ ವಾಯುನೆಲೆಯಲ್ಲಿ ವಾಯುಪಡೆಗೆ ಸೇರಿದ ಹಲವಾರು ಸ್ವತ್ತುಗಳಿವೆ. ಇದನ್ನು ಗುರಿಯಾಗಿಸಿಕೊಂಡು ಡ್ರೋನ್ ಗಳನ್ನು ಬಳಸಿ ಸ್ಫೋಟಕಗಳನ್ನು ಹಾಕಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.