×
Ad

ತುಟ್ಟಿಭತ್ಯೆ, ತುಟ್ಟಿ ಪರಿಹಾರ ಪಾವತಿಗೆ ಆದೇಶಿಸಿಲ್ಲ: ವಿತ್ತ ಸಚಿವಾಲಯದ ಸ್ಪಷ್ಟನೆ

Update: 2021-06-27 20:49 IST

ಹೊಸದಿಲ್ಲಿ,ಜೂ.27: ಜುಲೈ ತಿಂಗಳಿನಿಂದ ಕೇಂದ್ರ ಸರಕಾರದ ನೌಕರರಿಗೆ ತುಟ್ಟಿಭತ್ಯೆ (ಡಿ.ಎ)ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿ.ಆರ್.) ಪಾವತಿಯನ್ನು ಪುನರಾರಂಭಿಸಲು ತಾನು ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ವಿತ್ತ ಸಚಿವಾಲಯವು ಸ್ಪಷ್ಟ ಪಡಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆದೇಶದ ಪ್ರತಿಯು ನಕಲಿಯಾಗಿದೆ ಎಂದು ಅದು ತಿಳಿಸಿದೆ.

ಡಿ.ಎ.ಮತ್ತು ಡಿ.ಆರ್.ಅನ್ನು ಪ್ರತಿವರ್ಷ ಜ.1 ಮತ್ತು ಜು.1ರಂದು ಪರಿಷ್ಕರಿಸಲಾಗುತ್ತದೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷದ ಎಪ್ರಿಲ್ನಲ್ಲಿ ಸರಕಾರವು ತನ್ನ ನೌಕರರಿಗೆ ಡಿ.ಎ.ಮತ್ತು ಪಿಂಚಣಿದಾರರಿಗೆ ಡಿ.ಆರ್.ನ ಮೂರು ಕಂತುಗಳ ಪಾವತಿಯನ್ನು ತಡೆಹಿಡಿದಿತ್ತು.

2020,ಜ.1ರಿಂದ ಬಾಕಿಯಾಗಿರುವ ಡಿ.ಎ.ಮತ್ತು ಡಿ.ಆರ್.ಗಳ ಹೆಚ್ಚುವರಿ ಕಂತುಗಳನ್ನು ಪಾವತಿಸಲಾಗುವುದಿಲ್ಲ ಎಂದು ಪ್ರಕಟಿಸಿದ್ದ ವಿತ್ತ ಸಚಿವಾಲಯವು,2020,ಜು.1 ಮತ್ತು 2021,ಜ.1ರಿಂದ ಹೆಚ್ಚುವರಿ ಕಂತುಗಳನ್ನೂ ಪಾವತಿಸಲಾಗುವುದಿಲ್ಲ,ಆದರೆ ಹಾಲಿ ದರಗಳಲ್ಲಿ ಡಿ.ಎ.ಮತ್ತು ಡಿ.ಆರ್.ಗಳನ್ನು ಪಾವತಿಸಲಾಗುತ್ತದೆ ಎಂದು ತಿಳಿಸಿತ್ತು.
  
ತನ್ಮಧ್ಯೆ,ಡಿ.ಎ.ಮತ್ತು ಡಿ.ಆರ್.ಬಿಡುಗಡೆಗೊಳಿಸದಿದ್ದಕ್ಕಾಗಿ ಮೋದಿ ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಕೊರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸೇವೆಯಲ್ಲಿ ತೊಡಗಿಕೊಂಡಿದ್ದ 113 ಲಕ್ಷ ನೌಕರರನ್ನು ಉತ್ತೇಜಿಸುವ ಬದಲು ಕೇಂದ್ರ ಸರಕಾರವು ಅವರ ಶ್ರಮದ ದುಡಿಮೆಯ ಹಣವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ. ಯೋಧರು, ಸರಕಾರಿ ನೌಕರರು ಮತ್ತು ಪಿಂಚಣಿದಾರರಿಂದ 37,000 ಕೋ.ರೂ.ಗಳನ್ನು ಲೂಟಿ ಮಾಡುವುದು ಅಪರಾಧವಾಗಿದೆ ಎಂದು ಟ್ವೀಟಿಸಿದ್ದಾರೆ.
 
ಸರಕಾರವು ತನ್ನ ನೌಕರರು ಮತ್ತು ಸಶಸ್ತ್ರ ಪಡೆಗಳ ಬಗ್ಗೆ ಸಂವೇದನಾಶೂನ್ಯವಾಗಬಾರದು. ವೇತನಗಳು ಕಡಿಮೆಯಾಗುತ್ತಿರುವಾಗ ಮತ್ತು ಹಣದುಬ್ಬರವು ಹೆಚ್ಚುತ್ತಿರುವಾಗ ಅದು ತಮಾಷೆಗಳನ್ನು ಮಾಡಬಾರದು ಎಂದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ ಸಿಂಘ್ವಿ ಅವರು,ಕಳೆದ ವರ್ಷ ಅಮಾನತುಗೊಳಿಸಲಾಗಿದ್ದ ತುಟ್ಟಿಭತ್ಯೆಯನ್ನು ತಕ್ಷಣ ಪಾವತಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News