×
Ad

ಇ-ಕಾಮರ್ಸ್ ನಿಯಮಗಳಲ್ಲಿ ಪ್ರಸ್ತಾವಿತ ಬದಲಾವಣೆಗಳಿಂದ ಉದ್ಯೋಗಗಳ ಮೇಲೆ ಪರಿಣಾಮ ಕುರಿತು ರಾಜ್ಯಗಳ ಕಳವಳ

Update: 2021-06-27 20:51 IST

 ಹೊಸದಿಲ್ಲಿ,ಜೂ.27: ಕೆಲವು ರಾಜ್ಯಗಳು,ಹೆಚ್ಚಾಗಿ ಬಿಜೆಪಿಯೇತರ ಆಡಳಿತದ ರಾಜ್ಯಗಳು ಅನುಚಿತ ಮಾರಾಟ ಮತ್ತು ಮೋಸದ ರಿಯಾಯಿತಿಗಳನ್ನು ತಡೆಯಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಪ್ರಸ್ತಾಪಿಸಿರುವ ನೂತನ ಇ-ಕಾಮರ್ಸ್ ನಿಯಮಾವಳಿಗಳ ಬಗ್ಗೆ ಆತಂಕಗೊಂಡಿವೆ. ಈ ನಿಯಮಗಳು ಇತ್ತೀಚಿನ ವರ್ಷಗಳಲ್ಲಿ ಇ-ಕಾಮರ್ಸ್ ತಾಣಗಳು ಸೃಷ್ಟಿಸಿರುವ ಉದ್ಯೋಗಗಳು ಹಾಗೂ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಮಾರುಕಟ್ಟೆ ಪ್ರವೇಶಾವಕಾಶಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತವೆ ಎಂದು ಅವು ಕಳವಳಗೊಂಡಿವೆ.

ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು,2020ರಲ್ಲಿ ಯಾವುದೇ ಬದಲಾವಣೆಗಳು ತಮ್ಮ ಆರ್ಥಿಕ ಬೆಳವಣಿಗೆ ಮಾರ್ಗಗಳು ಮತ್ತು ಆದಾಯ ಸಂಗ್ರಹಗಳಿಗೆ ಅಡ್ಡಿಯನ್ನುಂಟು ಮಾಡದಿರಲು ಪ್ರಸ್ತಾಪಿತ ನಿಯಮಗಳಲ್ಲಿ ಪ್ರಬಲ ಸುರಕ್ಷಾ ಕ್ರಮಗಳನ್ನು ಸೂಚಿಸಲು ಈ ರಾಜ್ಯ ಸರಕಾರಗಳು ಯೋಜಿಸಿವೆ. ಆದರೆ ತಮ್ಮ ಸಲಹೆಗಳು ಗ್ರಾಹಕರಿಗೆ ರಕ್ಷಣೆಯನ್ನು ಹೆಚ್ಚಿಸುವ ಪ್ರಸ್ತಾವಿತ ನಿಯಮಗಳ ಉದ್ದೇಶಕ್ಕೆ ಅಡ್ಡಿಯನ್ನುಂಟು ಮಾಡುವುದಿಲ್ಲ ಎಂದು ಈ ರಾಜ್ಯಗಳ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
   
ಗ್ರಾಹಕರ ರಕ್ಷಣೆಯು ಉದ್ಯೋಗಗಳು, ಎಂಎಸ್ಎಂಇಗಳು ಮತ್ತು ಇ-ಕಾಮರ್ಸ್ ಕ್ಷೇತ್ರದ ಬೆಳವಣಿಗೆಯಿಂದ ಪ್ರಯೋಜನ ಪಡೆಯುತ್ತಿರುವ ಲಕ್ಷಾಂತರ ಸ್ವೋದ್ಯೋಗಿಗಳ ಸುರಕ್ಷತೆಯಷ್ಟೇ ಮುಖ್ಯವಾಗಿರುವುದರಿಂದ ಅದು ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಸೂಕ್ಷ್ಮವಾದ ವಿಷಯವಾಗಿದೆ ಎಂದು ಹೇಳಿರುವ ಈ ಅಧಿಕಾರಿಗಳು,ಕೇಂದ್ರದ ಕರಡು ನಿಯಮಾವಳಿಗಳಿಗೆ ಸಲಹೆಗಳನ್ನು ಸಲ್ಲಿಸಲು ಜು.6ರವರೆಗೆ ಸಮಯಾವಕಾಶವಿದ್ದು,ಎಲ್ಲ ವಿಷಯಗಳನ್ನು ಚರ್ಚಿಸಿದ ಮತ್ತು ಎಲ್ಲ ಪಾಲುದಾರರೊಂದಿಗೆ ಸಮಾಲೋಚಿಸಿದ ಬಳಿಕ ಕೇಂದ್ರಕ್ಕೆ ವಿಧ್ಯುಕ್ತ ಸಲಹೆಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ವಿವಿಧ ಇ-ಕಾಮರ್ಸ್ ತಾಣಗಳಲ್ಲಿ ಹೂಡಿಕೆ ಮಾಡಿರುವ ಅಥವಾ ಅವುಗಳೊಂದಿಗೆ ವ್ಯವಹಾರಗಳನ್ನು ಹೊಂದಿರುವ ಹಲವಾರು ವಿದೇಶಿ ಮತ್ತು ದೇಶಿಯ ಹೂಡಿಕೆದಾರರು ಮತ್ತು ಇತರ ಉದ್ಯಮ ಸಂಸ್ಥೆಗಳೂ ಫ್ಲಾಷ್ ಸೇಲ್ ಅಥವಾ ಭಾರೀ ರಿಯಾಯಿತಿಯ ಮಾರಾಟ ಮತ್ತು ಡಾಟಾ ಹಂಚಿಕೆ ಸೇರಿದಂತೆ ಕೆಲವು ಪ್ರಸ್ತಾವಿತ ನಿಯಮಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ ಎನ್ನಲಾಗಿದೆ.

ಅಮೆಝಾನ್ ಮತ್ತು ವಾಲ್ಮಾರ್ಟ್/ಫ್ಲಿಪ್ ಕಾರ್ಟ್ ನಂತಹ ಪ್ರಮುಖ ಇ-ಕಾಮರ್ಸ್ ತಾಣಗಳು ಹಾಗೂ ಕೆಲವು ಕೈಗಾರಿಕಾ ಸಂಸ್ಥೆಗಳೂ ಕೇಂದ್ರದ ಪ್ರಸ್ತಾವಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಶೀಘ್ರವೇ ಸಲ್ಲಿಸುವ ಸಾಧ್ಯತೆಗಳಿವೆ.
 
ಪ್ರಸ್ತಾವಿತ ನಿಯಮಗಳು ರಾಜ್ಯದ,ವಿಶೇಷವಾಗಿ ಎಂಎಸ್ಎಂಇಗಳು ಮತ್ತು ಸಣ್ಣ ಉದ್ಯಮಗಳಿಗೆ ಸಂಬಂಧಿಸಿದಂತೆ ಉದ್ಯಮ ಪರಿಸರವ್ಯವಸ್ಥೆಯನ್ನು ವ್ಯತ್ಯಯಗೊಳಿಸಬಹುದು ಮತ್ತು ಬಳಕೆದಾರರ ಹಿತಾಸಕ್ತಿಗಳ ರಕ್ಷಣೆಯ ಬದಲು ಅವರಿಗೆ ಖರೀದಿ ಆಯ್ಕೆಗಳನ್ನ್ನು ಸೀಮಿತಗೊಳಿಸುತ್ತವೆ ಎಂದು ಬಿಜೆಪಿಯೇತರ ದೊಡ್ಡ ರಾಜ್ಯವೊಂದರ ಹಿರಿಯ ಅಧಿಕಾರಿಯೋರ್ವರು ಅಭಿಪ್ರಾಯ ವ್ಯಕ್ತಪಡಿಸಿದರು.
 
ಪ್ರಸ್ತಾವಿತ ನಿಯಮಗಳಂತೆ ಇ-ಕಾಮರ್ಸ್ ತಾಣಗಳು ಯಾವುದೇ ಕಾಯ್ದೆಯಡಿ ಅಪರಾಧಗಳ ತಡೆ,ಪತ್ತೆ,ತನಿಖೆ ಮತ್ತು ಕಾನೂನು ಕ್ರಮಗಳಿಗಾಗಿ ಸರಕಾರಿ ಸಂಸ್ಥೆಯ ಆದೇಶ ಸ್ವೀಕರಿಸಿದ 72 ಗಂಟೆಗಳಲ್ಲಿ ಮಾಹಿತಿಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News