ಪುದುಚೇರಿ: ಬಿಜೆಪಿಯ ಇಬ್ಬರ ಸಹಿತ 5 ಸಚಿವರ ಪ್ರಮಾಣವಚನ

Update: 2021-06-27 18:40 GMT

ಪುದುಚೇರಿ: ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ಎನ್ ರಂಗಸ್ವಾಮಿ ಅಧಿಕಾರ ವಹಿಸಿಕೊಂಡ ೫೦ ದಿನದ ಬಳಿಕ ಸಂಪುಟಕ್ಕೆ ೫ ಸಚಿವರನ್ನು ಸೇರ್ಪಡೆಗೊಳಿಸಲಾಗಿದೆ. 

ಇದರಲ್ಲಿ ಎನ್ಆರ್ ಕಾಂಗ್ರೆಸ್ ನ ಕೆ.ಲಕ್ಷ್ಮೀ ನಾರಾಯಣನ್, ಸಿ ಜೀವಕೌಮರ್ ಮತ್ತು ಚಂದಿರಾ ಪ್ರಿಯಾಂಗಾ, ಬಿಜೆಪಿಯ ನಮಶ್ಶಿವಾಯಂ  ಮತ್ತು ಸಾಯ್ ಜೆ ಸರವಣನ್ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಚುನಾವಣೆಗೆ ಕೆಲವೇ ದಿನಗಳ ಮುಂಚೆ ಕಾಂಗ್ರೆಸ್ ತೊರೆದಿದ್ದ ನಮ ಶಿವಾಯಂ  ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 
ಅಧಿಕಾರ ಹಂಚಿಕೆಯ ಕುರಿತು ಉಭಯ ಪಕ್ಷಗಳ ಮಧ್ಯೆ ಸುದೀರ್ಘ ಮಾತುಕತೆ ನಡೆದ ಬಳಿಕ ಸಂಪುಟ ವಿಸ್ತರಣೆ ನಡೆದಿದೆ. 

ಪುದುಚೇರಿಯಲ್ಲಿ ಅಷ್ಟೊಂದು ಪ್ರಭಾವೀ ದಾಖಲೆ ಹೊಂದಿಲ್ಲದ ಬಿಜೆಪಿ, ಇದೇ ಮೊದಲ ಬಾರಿ ಇಲ್ಲಿ ಸರಕಾರದ ಭಾಗವಾಗಿದೆ. ನೂತನ ಸಚಿವರಿಗೆ ರಾಜ್ಯಪಾಲೆ ತಮಿಳಿಸಾಯ್ ಸೌಂದರರಾಜನ್ ಪ್ರಮಾಣವಚನ ಬೋಧಿಸಿದರು. ಪುದುಚೇರಿಯಲ್ಲಿ ಸುಮಾರು ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸಚಿವೆಯಾದ ದಾಖಲೆ ಚಂದಿರಾ ಪ್ರಿಯಾಂಗಾ ಅವರದ್ದಾಗಿದೆ. 

ಪುದುಚೇರಿ ವಿಧಾನಸಭೆಯ ೩೦ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್ಆರ್ ಕಾಂಗ್ರೆಸ್ ೧೦, ಅದರ ಮಿತ್ರ ಪಕ್ಷ ಬಿಜೆಪಿ ೬ ಸ್ಥಾನ ಗೆದ್ದು ಸರಕಾರ ರಚಿಸಿವೆ. ಮುಖ್ಯಮಂತ್ರಿಯಾಗಿ ಮೇ ೭ರಂದು ರಂಗಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ದರು. ಬಿಜೆಪಿ ಉಪಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿತ್ತು. ಕಡೆಗೆ ಸ್ಪೀಕರ್ ಹುದ್ದೆಗೆ ತೃಪ್ತಿಪಟ್ಟುಕೊಂಡಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ ೨ ಸ್ಥಾನ, ಅದರ ಮಿತ್ರಪಕ್ಷ ಡಿಎಂಕೆ ೬ ಸ್ಥಾನ ಗೆದ್ದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News