ಬಂಗಾಳ ಬಿಜೆಪಿಗರ ಫೇಸ್ ಬುಕ್ ಫ್ರೆಂಡ್ಸ್ ಪಟ್ಟಿಯಲ್ಲಿ ಎದುರಾಳಿ ಪಕ್ಷದವರು ಇರುವಂತಿಲ್ಲ: ಶಿಸ್ತು ಸಮಿತಿ

Update: 2021-06-28 07:05 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಯಾವುದೇ ಬಿಜೆಪಿ ಕಾರ್ಯಕರ್ತ ತನ್ನ ಫೇಸ್ ಬುಕ್ ಫ್ರೆಂಡ್ಸ್ ಪಟ್ಟಿಯಲ್ಲಿ ಎದುರಾಳಿ ಪಕ್ಷದ ಸದಸ್ಯರನ್ನು ಹೊಂದುವಂತಿಲ್ಲ. ಅಷ್ಟೇ ಅಲ್ಲ ಬಿಜೆಪಿ ವಿರೋಧಿ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಲೈಕ್ ಮಾಡುವುದು ಕೂಡ ನಿಷಿದ್ಧ. ಈ ನಿಯಮಗಳನ್ನು ಉಲ್ಲಂಘಿಸುವ ಧೈರ್ಯ ತೋರುವವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಪಕ್ಷದ ಶಿಸ್ತು ಸಮಿತಿ ಎಚ್ಚರಿಸಿದೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ನಿರ್ವಹಣೆಯನ್ನು ಹಲವು ಬಿಜೆಪಿಗರೇ ಟೀಕಿಸುತ್ತಿರುವುದರಿಂದ ಇಂತಹವರನ್ನು ಮಟ್ಟ ಹಾಕುವ ಯತ್ನವಾಗಿ ಈ ನಿಯಮ ಜಾರಿಗೆ ತರಲಾಗಿದೆ.

ನಮಗಿರುವ ಸ್ನೇಹಿತರ ಪೈಕಿ ಹಲವರು ಇತರ ಪಕ್ಷಗಳವರೂ ಇದ್ದಾರೆ. ಹೀಗಿರುವಾಗ ಪಕ್ಷದ ಇಂತಹ ಆದೇಶ ನಿಜವಾಗಿಯೂ ಆಘಾತಕಾರಿ ಎಂದು ಕೆಲ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಇತ್ತೀಚಿಗಿನ ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ ಪಕ್ಷದ ಕೇಂದ್ರ ನಾಯಕತ್ವವೇ ಕಾರಣ ಎಂದು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಹಲವು ನಾಯಕರು ದೂರಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ತ್ರಿಸದಸ್ಯ ಶಿಸ್ತು ಸಮಿತಿಯನ್ನು ಜೂನ್ 8ರಂದು ರಚಿಸಲಾಗಿತ್ತು. ಸಂಸದ ಸುಭಾಸ್ ಸರ್ಕಾರ್ ಈ ಸಮಿತಿಯ ನೇತೃತ್ವ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News