ಕೇಂದ್ರದ ಹೊಸ ಐಟಿ ನಿಯಮಗಳಿಗೆ ತಡೆ ಹೇರಲು ನಿರಾಕರಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಡಿಜಿಟಲ್ ಸುದ್ದಿ ತಾಣಗಳಿಗೆ ನಿಯಂತ್ರಣ ಹೇರುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳಿಗೆ ತಡೆ ಹೇರಲು ದಿಲ್ಲಿ ಹೈಕೋರ್ಟ್ ಇಂದು ನಿರಾಕರಿಸಿದೆ. ಈ ಹಂತದಲ್ಲಿ ಈ ಕಾಯಿದೆಗೆ ತಡೆ ಹೇರಬೇಕೆಂಬ ಅಪೀಲುದಾರರ ಬೇಡಿಕೆಗೆ ತಾನು ಸಹಮತ ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ, ದಿ ವೈರ್, ಕ್ವಿಂಟ್ ಡಿಜಿಟಲ್ ಮೀಡಿಯಾ ಮತ್ತು ಆಲ್ಟ್ ನ್ಯೂಸ್‍ನ ಮಾತೃ ಸಂಘಟನೆ ಪ್ರಾವ್ಡಾ ಮೀಡಿಯಾ ಫೌಂಡೇಶನ್ ಹೊಸ ಐಟಿ ನಿಯಮಗಳಿಗೆ ತಡೆ ಕೋರಿ ಅಪೀಲು ಸಲ್ಲಿಸಿದ್ದವಲ್ಲದೆ ತಮಗೆ ಹೊಸ ನೋಟಿಸ್ ಜಾರಿಗೊಳಿಸಲಾಗಿದೆ ಹಾಗೂ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಬಲವಂತದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ ಎಂದು ತಿಳಿಸಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿಸ್ ಸಿ ಹರಿಶಂಕರ್ ಹಾಗೂ ಸುಬ್ರಹ್ಮಣ್ಯಂ ಪ್ರಸಾದ್ ಅವರ ನೇತೃತ್ವದ ರಜಾಕಾಲದ ಪೀಠ, ತಡೆಯಾಜ್ಞೆ ಪಡೆಯಲಾಗಿಲ್ಲದ ಸರಕಾರದ ಅಧಿಸೂಚನೆ ಪಾಲಿಸುವಂತೆ ಮಾತ್ರ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.
"ನಿಮ್ಮ ಜತೆಗೆ ನಮಗೆ ಸಹಮತವಿಲ್ಲ. ನಿಮಗೆ ಬೇಕಿದ್ದರೆ ಇದಕ್ಕಾಗಿ ವಿಸ್ತøತ ಕಾರಣ ನೀಡಿ ಆದೇಶ ನೀಡುತ್ತೇವೆ ಅಥವಾ ನಿಮಗೆ ಬೇಕಿದ್ದರೆ ರೋಸ್ಟರ್ ಪೀಠದ ಮುಂದೆ ಇದನ್ನು ಮತ್ತೆ ಇಡಬಹುದು" ಎಂದು ನ್ಯಾಯಾಲಯ ಹೇಳಿತು.
ರಜಾಕಾಲ ಮುಗಿದ ನಂತರ ಮತ್ತೆ ವಿಚಾರಣೆಗೆ ಈ ಪ್ರಕರಣವನ್ನು ಇಡುವಂತೆ ಅಪೀಲುದಾರರ ಪರ ವಕೀಲೆ ನಿತ್ಯಾ ರಾಮಕೃಷ್ಣನ್ ನ್ಯಾಯಾಲಯಕ್ಕೆ ತಿಳಿಸಿದರು. ಮುಂದಿನ ವಿಚಾರಣೆ ಜುಲೈ 7ಕ್ಕೆ ನಿಗದಿಯಾಗಿದೆ.