ಲ್ಯಾಂಡ್ ಜಿಹಾದ್, ಲವ್ ಜಿಹಾದ್ ಇತ್ಯಾದಿಗಳ ಬಳಿಕ ಈಗ ಹಿಂದುತ್ವ ಗುಂಪುಗಳ ಹೊಸ ಅಸ್ತ್ರ ‘ರೆಡಿ ಜಿಹಾದ್ʼ

Update: 2021-06-28 13:29 GMT
Photo: Thewire.in

ಹೊಸದಿಲ್ಲಿ,ಜೂ.28: ಲ್ಯಾಂಡ್ ಜಿಹಾದ್,ಲವ್ ಜಿಹಾದ್,ಕೊರೋನ ಜಿಹಾದ್ ಮತ್ತು ಸಿವಿಲ್ ಸರ್ವಿಸಸ್ ಜಿಹಾದ್ ನಂತಹ ಶಬ್ದಗಳನ್ನು ತೇಲಿಬಿಟ್ಟ ಬಳಿಕ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮತ್ತು ಇತರ ಕಡೆಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಹಿಂದುತ್ವ ಕಾರ್ಯಕರ್ತರು ‘ರೆಡಿ ಜಿಹಾದ್(ಬೀದಿಬದಿ ವ್ಯಾಪಾರಿ ಜಿಹಾದ್)’ ಎಂಬ ಶಬ್ದವನ್ನು ಹುಟ್ಟುಹಾಕುವ ಮೂಲಕ ಹೊಸ ವಿಧದ ಸಂಚನ್ನು ರೂಪಿಸಿದ್ದಾರೆ ಎಂದು ಸುದ್ದಿಜಾಲತಾಣ ‘The Wire ’ ತನ್ನ ತನಿಖಾವರದಿಯಲ್ಲಿ ಬಯಲುಗೊಳಿಸಿದೆ.
 
ಈ ಕಾರ್ಯಕರ್ತರು ವಿವಿಧ ಮೂಲಭೂತವಾದಿ ಹಿಂದುತ್ವ ಗುಂಪುಗಳಿಗೆ ಸೇರಿದ್ದಾರೆ,ಆದರೆ ದೇಶದ ಆಡಳಿತಾರೂಢ ಬಿಜೆಪಿಯ ಸ್ಥಳೀಯ ನಾಯಕರು ಮತ್ತು ಕನಿಷ್ಠ ಒಂದು ಸುದ್ದಿವಾಹಿನಿ,ನೊಯ್ಡಾ ಮೂಲದ ಸುದರ್ಶನ ಟಿವಿ ಈ ಕೋಮು ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇತ್ತೀಚಿಗೆ ಪ್ರಸಾರ ಮಾಧ್ಯಮಗಳಿಗಾಗಿ ನೀತಿ ಸಂಹಿತೆಯ ಉಲ್ಲಂಘನೆಗಳ ಮೇಲೆ ನಿಗಾ ವ್ಯವಸ್ಥೆಯನ್ನು ಬಿಗುಗೊಳಿಸಿದ್ದರೂ ಸುದರ್ಶನ ಟಿವಿಗೆ ಇದು ಲೆಕ್ಕಕ್ಕಿದ್ದಂತಿಲ್ಲ.


  
2021,ಜೂ.18ರಂದು ದಿಲ್ಲಿಯ ಉತ್ತಮ ನಗರದಲ್ಲಿ ‘ಜೈ ಶ್ರೀ ರಾಮ’ ಎಂದು ಕೂಗುತ್ತಿದ್ದ ಅಪರಿಚಿತ ವ್ಯಕ್ತಿಗಳು ಮುಸ್ಲಿಂ ಹಣ್ಣು ವ್ಯಾಪಾರಿ ರಿಜ್ವಾನ್ ಎಂಬಾತನನ್ನು ಬರ್ಬರವಾಗಿ ಥಳಿಸಿದ್ದರು. ಎರಡು ದಿನಗಳ ಬಳಿಕ ಜೂ.20ರಂದು ಹಿಂದುತ್ವ ಕಾರ್ಯಕರ್ತರು ತಾವು ಹೇಳುವ ‘ಜಿಹಾದಿ’ ಹಣ್ಣು ವ್ಯಾಪಾರಿಗಳ ಹಿಂಸಾಚಾರ ಮತ್ತು ಅತಿಕ್ರಮಣದ ವಿರುದ್ಧ ಪ್ರತಿಭಟಿಸಲು ಪ್ರದೇಶದಲ್ಲಿ ರಸ್ತೆ ತಡೆಯನ್ನು ನಡೆಸಿದ್ದರು. ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಕಾರ್ಯಕರ್ತರು ಹೆಚ್ಚಾಗಿ ಮುಸ್ಲಿಮರೇ ಆಗಿರುವ ಬೀದಿ ವ್ಯಾಪಾರಿಗಳಿಗೆ ಈ ಪ್ರದೇಶದಲ್ಲಿ ಸ್ವಾಗತವಿಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸಲು ಲಾಠಿಗಳೊಂದಿಗೆ ಜಮಾಯಿಸಿದ್ದರು. ಸಂಜೆ ಕಾರ್ಯಕರ್ತರು ಮತ್ತು ಸ್ಥಳೀಯ ಅಂಗಡಿಕಾರರು ಹಿಂದು ಏಕತೆಯ ಪ್ರದರ್ಶನವಾಗಿ ರಸ್ತೆಯ ಮಧ್ಯೆ ಹನುಮಾನ್ ಚಾಲೀಸಾವನ್ನು ಪಠಿಸಿದ್ದರು.

ಸ್ಥಳೀಯರು ಹೇಳುವಂತೆ ಪ್ರಸ್ತುತ ಉದ್ವಿಗ್ನತೆಗೆ ತಕ್ಷಣದ ಕಾರಣವೆಂದರೆ ವಾರದ ಹಿಂದೆ ನಡೆದಿದ್ದ ಗಲಾಟೆ. ಆ ಸಂದರ್ಭದಲ್ಲಿ ಹಣ್ಣು ವ್ಯಾಪಾರಿಗಳು ಸ್ಥಳೀಯ ಅಂಗಡಿಕಾರನೋರ್ವನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಜೂ.20ರಂದು ಉತ್ತಮ ನಗರದಿಂದ ಲೈವ್ ವೀಡಿಯೊದಲ್ಲಿ ತಾವು ಈ ಪ್ರದೇಶದಿಂದ ಮುಸ್ಲಿಂ ವ್ಯಾಪಾರಿಗಳನ್ನು ಓಡಿಸಿರುವುದಾಗಿ ಅಪರಿಚಿತ ವ್ಯಕ್ತಿಗಳು ಹೇಳಿಕೊಂಡಿದ್ದರು. ಎಲ್ಲ ಬೀದಿ ಬದಿ ಮಾರಾಟಗಾರರು ಮುಸ್ಲಿಮರೇ ಆಗಿದ್ದಾರೆ ಎಂದು ಹೇಳಿದ ಹಿಂದುತ್ವ ಕಾರ್ಯಕರ್ತನೋರ್ವ,ಅವರು ಗ್ರಾಹಕರನ್ನು ವಂಚಿಸುತ್ತಾರೆ,ಅವರು ನಡೆದಾಡುವ ಕ್ಯಾನ್ಸರ್ ಆಗಿದ್ದಾರೆ ಎಂದು ಕಿಡಿ ಕಾರಿದ್ದ.

ನಗರ ಪ್ರದೇಶಗಳಲ್ಲಿ ಬೀದಿಬದಿ ವ್ಯಾಪಾರಿಗಳು ಮತ್ತು ಅಂಗಡಿಕಾರರ ನಡುವೆ ಜಗಳಗಳು ಸಾಮಾನ್ಯವಾಗಿವೆ. ನಗರ ಯೋಜನೆಗಳು ಮತ್ತು ಜೀವನೋಪಾಯಗಳ ಅನುಪಸ್ಥಿತಿಯು ಇದಕ್ಕೆ ಪೂರಕವಾಗಿದೆ. ಆದರೆ ಉತ್ತಮ ನಗರದಲ್ಲಿ ಪ್ರದೇಶದಲ್ಲಿನ ವಿವಾದಕ್ಕೆ ಕೋಮುಬಣ್ಣ ಹಚ್ಚಲು ಬಲಪಂಥೀಯ ಕಾರ್ಯಕರ್ತರು ಉದ್ದೇಶಪೂರ್ವಕ ಮತ್ತು ಸಂಘಟಿತ ಪ್ರಯತ್ನಗಳನ್ನು ನಡೆಸಿದ್ದರು ಎನ್ನುವುದನ್ನು ಎ.21ರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಪೋಸ್ಟ್ ಗಳು ಮತ್ತು ಆನ್ ಲೈನ್ ಕಮೆಂಟ್ ಗಳ ಪರಾಮರ್ಶೆಯು ಸೂಚಿಸುತ್ತಿದೆ.
     
ಉತ್ತಮ ನಗರದಲ್ಲಿಯ ಕೆಲವು ರಸ್ತೆಗಳು ಜನರು ಮತ್ತು ವಾಹನ ದಟ್ಟಣೆಯಿಂದ ಕೂಡಿದ್ದು,ರಸ್ತೆಬದಿಗಳನ್ನು ಹಣ್ಣು ವ್ಯಾಪಾರಿಗಳು ಮತ್ತು ರಿಕ್ಷಾಗಳು ಅತಿಕ್ರಮಿಸಿರುವುದರಿಂದ ಮತ್ತು ನಾಯಿಕೊಡೆಗಳಂತೆ ತಲೆಯೆತ್ತಿರುವ ಕೋಚಿಂಗ್ ಸೆಂಟರ್ಗಳಿಂದಾಗಿ ಇಲ್ಲಿ ಟ್ರಾಫಿಕ್ ಜಾಮ್ ಮಾಮೂಲಾಗಿದೆ. ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಕೋರಿ ಇಲ್ಲಿಯ ನಿವಾಸಿಗಳು ಮತ್ತು ಅಂಗಡಿಕಾರರು ಮುನ್ಸಿಪಲ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. 

ಅಧಿಕಾರಿಗಳ ಮೇಲೆ ಒತ್ತಡ ಹೇರುವುದರ ಅಥವಾ ನ್ಯಾಯಾಲಯಕ್ಕೆ ಮೊರೆ ಹೋಗುವ ಬದಲು ಸ್ಥಳೀಯ ಬಿಜೆಪಿ ನಾಯಕರು ಮತ್ತು ವಿವಿಧ ಹಿಂದುತ್ವ ಸಂಘಟನೆಗಳು ಕಾನೂನನ್ನು ತಮ್ಮ ಕೈಗೆತ್ತಿಕೊಂಡಿವೆ. ಪ್ರದೇಶದಿಂದ ಎತ್ತಂಗಡಿಯಾಗುವಂತೆ ಮುಸ್ಲಿಂ ಹಣ್ಣು ವ್ಯಾಪಾರಿಗಳಿಗೆ ಬೆದರಿಕೆಯೊಡ್ಡಿದ್ದು ಮಾತ್ರವಲ್ಲ, ಮುಸ್ಲಿಮರೊಂದಿಗೆ ವ್ಯವಹಾರ ಮಾಡುವುದನ್ನು ನಿಲ್ಲಿಸುವಂತೆ ಹಿಂದುಗಳಿಗೆ ಕರೆಯನ್ನೂ ನೀಡಿದ್ದಾರೆ.


 
ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುತ್ತಿರುವ ಆರೋಪಕ್ಕೆ ಗುರಿಯಾಗಿರುವ ತೀವ್ರ ಬಲಪಂಥೀಯ ಟಿವಿ ವಾಹಿನಿಯಾಗಿರುವ ಸುದರ್ಶನ ನ್ಯೂಸ್ ಉತ್ತಮನಗರ ಪ್ರತಿಭಟನೆಯನ್ನು ಅತ್ಯಂತ ಪ್ರಚೋದನಕಾರಿಯಾಗಿ ವರದಿ ಮಾಡಿತ್ತು. ಕಾರ್ಯಕ್ರಮದುದ್ದಕ್ಕೂ ಸುದರ್ಶನ ವರದಿಗಾರ ಸಾಗರ್ ಕುಮಾರ್ ಮತ್ತು ನಿರೂಪಕ ಶುಭಂ ತ್ರಿಪಾಠಿ ಅವರು ಮುಸ್ಲಿಮರನ್ನು ‘ಜಿಹಾದಿಗಳು ’ಎಂದೇ ಪ್ರಸ್ತಾಪಿಸಿದ್ದರು ಮತ್ತು ಅವರ ವಿರುದ್ಧ ಅವಮಾನಕಾರಿ ಶಬ್ದಗಳನ್ನು ಬಳಸಿದ್ದರು.


 
ಈ ಮುಸ್ಲಿಂ ಬೀದಿಬದಿ ಮಾರಾಟಗಾರರ ಪೈಕಿ ಹೆಚ್ಚಿನವರು ಈ ಹಿಂದೆ ಹಿಂಸಾಚಾರವನ್ನು ನಡೆಸಿದ್ದ ರೋಹಿಂಗ್ಯಾಗಳಾಗಿದ್ದಾರೆ ಎಂಬ ಮಾಹಿತಿಯೂ ಲಭಿಸಿದೆ ಎಂದು ಸುದರ್ಶನ ನ್ಯೂಸ್ನ ಅಂಕಣಕಾರ ಅಭಯ ಪ್ರತಾಪ್ ಬರೆದಿದ್ದರು.
  
ಇದೆಲ್ಲವೂ ಹಣ್ಣು ವ್ಯಾಪಾರಿ ಮತ್ತು ಅಂಗಡಿಕಾರನೋರ್ವನ ನಡುವಿನ ಚಿಲ್ಲರೆ ಜಗಳದಿಂದ ಆರಂಭಗೊಂಡಿತ್ತು. ಹಲವಾರು ಸಮಾಜವಿರೋಧಿ ಶಕ್ತಿಗಳು ಸೇರಿಕೊಂಡು ವಿಷಯಕ್ಕೆ ಕೋಮುಬಣ್ಣವನ್ನು ನೀಡಿವೆ. ಗುಂಪು ದೊಣ್ಣೆಗಳು ಮತ್ತು ಸರಳುಗಳಿಂದ ರಿಜ್ವಾನ್ನನ್ನು ಥಳಿಸಿದ್ದು,ಗಾಯಗೊಂಡಿರುವ ಆತ ದೀನದಯಾಳ ಉಪಾಧ್ಯಾಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕ್ರಿಮಿನಲ್ಗಳನ್ನು ಬಂಧಿಸುವ ಬದಲು ಪೊಲೀಸರೀಗ ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪಶ್ಚಿಮ ದಿಲ್ಲಿಯ ಹಣ್ಣು ಮಾರಾಟಗಾರರ ಒಕ್ಕೂಟದ ನಾಯಕ ಅಜಯ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ರಿಜ್ವಾನ್ ಗಂಭೀರವಾಗಿ ಗಾಯಗೊಂಡಿದ್ದರೂ ಮತ್ತು ಆತನ ಮೇಲಿನ ದಾಳಿಯು ಕೋಮು ಸ್ವರೂಪದ್ದಾಗಿತ್ತು ಎಂದು ಎಫ್ಐಆರ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದರೂ ಪೊಲೀಸರು ಸಾಮಾನ್ಯ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡು ಕೈ ತೊಳೆದುಕೊಂಡಿದ್ದಾರೆ.

ಹಿಂದುತ್ವ ಸಾಮಾಜಿಕ ಮಾಧ್ಯಮ ನೆಟ್ವರ್ಕ್ ಗಳಲ್ಲಿಯ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುವ ಹಲವಾರು ಪ್ರಚೋದನಾಕಾರಿ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದ ಸ್ಥಳೀಯ ಬಿಜೆಪಿ ನಾಯಕ ಹಿಮಾಂಶು ಯಾದವ ಅವರು,ಈ ಹಣ್ಣು ವ್ಯಾಪಾರಿಗಳೆಲ್ಲ ರೋಹಿಂಗ್ಯಾಗಳಾಗಿದ್ದಾರೆ. ಅವರು ಬಾಲಾಪರಾಧಿಗಳು ಮತ್ತು ಮಹಿಳೆಯರನ್ನು ಮುಂದಿಟ್ಟುಕೊಂಡು ದಾಳಿಗಳು ಮತ್ತು ಕೊಲೆಗಳನ್ನು ಮಾಡಿಸುತ್ತಿದ್ದಾರೆ ಎಂದು ಹೇಳಿದ್ದರು. ಯಾದವ್ ತಾನು ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ಸಂಸದ ಪ್ರವೇಶ ಸಾಹಿಬ್ ಸಿಂಗ್ ಜೊತೆಯಲ್ಲಿ ಇರುವ ಚಿತ್ರಗಳನ್ನೂ ತನ್ನ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದರು.

ಉತ್ತಮ ನಗರದಲ್ಲಿಯ ಸ್ಥಳೀಯ ಅಂಗಡಿಕಾರರ ಪ್ರತಿಭಟನೆಗಳಿಗೆ ಕೋಮುಬಣ್ಣ ನೀಡಿದ್ದು 2020 ಮಾರ್ಚ್ನಿಂದೀಚಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಪಡೆದುಕೊಂಡಿರುವ ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಹಿಂದುತ್ವ ಅಭಿಯಾನಕ್ಕೆ ಅನುಗುಣವಾಗಿತ್ತು.

ಜೂ.17ರಂದು ಹಿಂದುತ್ವ ಯೂಟ್ಯೂಬ್ ಚಾನೆಲ್ ಸತ್ಯ ಸನಾತನಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಿಜೆಪಿ ನಾಯಕ ಕಪಿಲ್ ಶರ್ಮಾ ‘ಹಲಾಲ್ ಆರ್ಥಿಕತೆ’ಗೆ ಪರ್ಯಾಯವನ್ನು ಚರ್ಚಿಸುತ್ತ,ನಮ್ಮ ಆಹಾರವು ಅದರೊಳಗೆ ಎಂಜಲನ್ನು ಉಗಿಯದ ಜನರಿಂದ ಪೂರೈಕೆಯಾಗುವಂತೆ ನೋಡಿಕೊಳ್ಳಲು ಹಿಂದು ಪರಿಸರವ್ಯವಸ್ಥೆಯು ಶ್ರಮಿಸುತ್ತಿದೆ ಎಂದು ಹೇಳಿದ್ದರು.
 
ಕಳೆದ ವರ್ಷ ಬಿಜೆಪಿ ಇಂತಹ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿತ್ತು ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳುತ್ತಿದ್ದಕ್ಕಾಗಿ ತನ್ನ ನಾಯಕರನ್ನು ಖಂಡಿಸಿತ್ತು. ಆದರೆ ಮಿಶ್ರಾ ಮತ್ತು ಅವರ ‘ಹಿಂದು ಪರಿಸರವ್ಯವಸ್ಥೆಯು ತನ್ನ ‘ಥೂಕ್(ಎಂಜಲು) ಜಿಹಾದ್’ ಸಿದ್ಧಾಂತವನ್ನು ಮುಂದೊತ್ತುತ್ತಲೇ ಇದೆ. ಮುಸ್ಲಿಂ ಬಾಣಸಿಗರು ಮತ್ತು ವ್ಯಾಪಾರಿಗಳು ರೋಗಗಳನ್ನು ಹರಡಲು ತಾವು ತಯಾರಿಸುವ ಆಹಾರದಲ್ಲಿ ಎಂಜಲು ಉಗಿಯುತ್ತಾರೆ ಎನ್ನುವುದು ಈ ಸಿದ್ಧಾಂತದ ಪ್ರತಿಪಾದನೆಯಾಗಿದೆ.

ಈಗ ಜಿತೇಂದ್ರ ಸರಸ್ವತಿ ಎನ್ನುವ ಹಿಂದುತ್ವ ನಾಯಕರೋರ್ವರು ‘ರೆಡಿ ಜಿಹಾದ್’ ವಿರುದ್ಧ ಸಮರ ಸಾರಲು ಪಣತೊಟ್ಟಿದ್ದು,ತನ್ನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಹಿಂದುಗಳಿಗೆ ಕರೆ ನೀಡಿದ್ದಾರೆ.‘ಭೂತಗಳು ಮತ್ತು ಪಿಶಾಚಿಗಳಿಂದ ’ ತಮ್ಮನ್ನು ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತೆ ಅವರು ಕರೆ ನೀಡಿದ್ದ ವೀಡಿಯೊ ಕೆಲವು ತಿಂಗಳುಗಳ ಹಿಂದೆ ವೈರಲ್ ಆಗಿತ್ತು.

ಕೃಪೆ: thewire.in

Writer - ಅಲಿಶಾನ್‌ ಜಾಫ್ರಿ (thewire.in)

contributor

Editor - ಅಲಿಶಾನ್‌ ಜಾಫ್ರಿ (thewire.in)

contributor

Similar News