ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾದ ಫೇಸ್‌ ಬುಕ್‌ ಮತ್ತು ಗೂಗಲ್‌ ಅಧಿಕಾರಿಗಳು

Update: 2021-06-29 13:34 GMT

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳ ದುರುಪಯೋಗದ ಕುರಿತು ಫೇಸ್‌ ಬುಕ್‌ ಮತ್ತು ಗೂಗಲ್‌ ಅಧಿಕಾರಿಗಳು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಮಂಗಳವಾರ ಹಾಜರಾಗಿದ್ದಾರೆ. ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅಧ್ಯಕ್ಷತೆಯ ಸಮಿತಿಯು ದುರ್ಬಳಕೆಯ ಕುರಿತಾದಂತೆ ವೈಯಕ್ತಿಕವಾಗಿ ಹಾಜರಾಗುವಂತೆ ಸಾಮಾಜಿಕ ಮಾಧ್ಯಮ ತಾಣಗಳ ಅಧಿಕಾರಿಗಳಿಗೆ ಸೂಚಿಸಿತ್ತು.

ಫೇಸ್‌ ಬುಕ್‌ ನಿಂದ ರಾಷ್ಟ್ರ ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ್‌ ತುಕ್ರಾಲ್‌ ಹಾಗೂ ಸಾಮಾನ್ಯ ಸಲಹೆಗಾರ್ತಿ ನಮ್ರತಾ ಸಿಂಗ್‌ ಹಾಜರಾಗಿದ್ದರು. ಗೂಗಲ್‌ ನಿಂದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಮುಖ್ಯಸ್ಥ ಅಮನ್‌ ಜೈನ್‌ ಹಾಗೂ ನಿರ್ದೇಶಕಿ ಗೀತಾಂಜಲಿ ದುಗ್ಗಲ್‌ ಪ್ರತಿನಿಧಿಸಿದ್ದರು ಎಂದು ತಿಳಿದು ಬಂದಿದೆ.

ಸಂಸದೀಯ ಸಮಿತಿ ಸಭೆಯು ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಆನ್‌ ಲೈನ್‌ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗ ತಡೆಯುವುದನ್ನು ತಮ್ಮ ಕಾರ್ಯಸೂಚಿಯಾಗಿರಿಸಿಕೊಂಡಿತ್ತು. ಈ ಹಿಂದೆ ಫೇಸ್‌ ಬುಕ್‌ ಪ್ರತಿನಿಧೀಗಳು ತಮ್ಮ ಕಂಪೆನಿಯ ನೀತಿಯ ತಮ್ಮ ಅಧಿಕಾರಿಗಳಿಗೆ ಕೋವಿಡ್‌ ಸಂಬಂಧಿತ ಪ್ರೋಟೊಕಾಲ್‌ ಗಳನ್ನು ಹೊಂದಿರುವ ಕಾರಣ ವೈಯಕ್ತಿಕ ಸಭೆಗಳಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ ಎಂದು ತಿಳಿಸಿದ್ದರು.

ಆದರೆ ನಮಗೆ ಯಾವುದೇ ವರ್ಚುವಲ್‌ ಸಭೆಗಳಿಗೆ ಅವಕಾಶ ಇಲ್ಲದ ಕಾರಣ ಖುದ್ದಾಗಿ ಬಂದು ಭೇಟಿಯಾಗಬೇಕಾಗುತ್ತದೆ ಎಂದು ಅಧ್ಯಕಷ ಶಶಿ ತರೂರ್‌ ಫೇಸ್‌ ಬುಕ್‌ ಗೆ ತಿಳಿಸಿದ್ದರು. ಇದೇ ಸಂಸದೀಯ ಸಭೆಯು ಮುಂದಿನ ವಾರಗಳಲ್ಲಿ ಯೂಟ್ಯೂಬ್‌ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ರತಿನಿಧಿಗಳನ್ನು ಕರೆಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News