ಸಂಘಪರಿವಾರದ ಒತ್ತಡದಿಂದ ಆರೋಪ ಮಾಡಿದ್ದೆ: ʼಲವ್ ಜಿಹಾದ್ʼ ಆರೋಪ ಹಿಂಪಡೆದ ಯುವತಿ; ವರದಿ
ಹೊಸದಿಲ್ಲಿ, ಜೂ. 30: ಬಲವಂತವಾಗಿ ಮತಾಂತರಗೊಳಿಸಿ ತನ್ನ ವಿವಾಹ ನೆರವೇರಿಸಲಾಗಿದೆ ಎಂದು ಆರೋಪಿಸಿ ಇಬ್ಬರು ಮುಸ್ಲಿಂ ಸಹೋದರರ ವಿರುದ್ಧ ದೂರು ದಾಖಲಿಸಿದ್ದ 24ರ ಹರೆಯದ ಮುಝಪ್ಫರ್‌ನಗರ ಜಿಲ್ಲೆಯ ಸಿಖ್ ಯುವತಿ ಈಗ ತನ್ನ ಆಪಾದನೆ ಹಿಂಪಡೆದಿದ್ದಾರೆ. ಅಲ್ಲದೆ, ಸಂಘಪರಿವಾರದ ಒತ್ತಡದಿಂದ ತಾನು ಈ ಆರೋಪ ಮಾಡಿದ್ದೇನೆ ಎಂದು ಪ್ರತಿಪಾದಿಸಿದ್ದಾಳೆ ಎಂದು ವರದಿಯಾಗಿದೆ.
ನೆರೆಯ ವ್ಯಕ್ತಿ ತನ್ನನ್ನು ಬಲವಂತವಾಗಿ ಮತಾಂತರಗೊಳಿಸಿ ವಿವಾಹವಾಗಿದ್ದಾನೆ ಎಂದು ಆರೋಪಿಸಿ ಸಿಖ್ ಯುವತಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರು ಮುಸ್ಲಿಂ ಸಹೋದರರ ವಿರುದ್ಧ ನೂತನ ಮತಾಂತರ ವಿರೋಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ದಂಡಾಧಿಕಾರಿಯವರ ಮುಂದೆ ಹೇಳಿಕೆ ದಾಖಲಿಸುವ ಸಂದರ್ಭ ಯುವತಿ ಇಬ್ಬರು ಮುಸ್ಲಿಂ ಸಹೋದರರ ವಿರುದ್ಧ ಮಾಡಿದ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೆ, ತಾನು ಸಂಘಪರಿವಾರದ ಬಲವಂತಕ್ಕೆ ಒಳಗಾಗಿ ಎಫ್‌ಐಆರ್ ದಾಖಲಿಸಿದ್ದೇನೆ ಎಂದು ಕೂಡ ಪ್ರತಿಪಾದಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಆರೋಪಿಗಳು ತನ್ನಿಂದ ಹಣ ತೆಗೆದುಕೊಂಡಿದ್ದಾರೆ ಅಥವಾ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಕೂಡ ಯುವತಿ ನಿರಾಕರಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲು ನ್ಯಾಯಾಲಯದ ಮೆಟ್ಟಿಲೇರಲು ಪೊಲೀಸರು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿದ ಎಎಸ್ಪಿ ಅರ್ಪಿತ್ ವಿಜಯ ವರ್ಗೀಯ, "ಮಹಿಳೆಯು ನಿಕಾಹನಾಮ (ಮದುವೆ ದಾಖಲಾತಿ ಪತ್ರ) ಸಹಿತ ಕೆಲವು ದಾಖಲೆಗಳನ್ನು ನೀಡಿದ್ದಾರೆ. ಆಕೆಯು ದೂರಿನೊಂದಿಗೆ ನೀಡಿರುವ ನಿಕಾಹನಾಮಾವನ್ನು ನಾವು ಪರಿಶೀಲಿಸಲಿದ್ದೇವೆ. ಅದರನ್ವಯ ಕ್ರಮ ಜರಗಿಸಲಾಗುವುದು" ಎಂದು ತಿಳಿಸಿದ್ದಾರೆ.