ಮಧ್ಯಪ್ರದೇಶ: ನಾಪತ್ತೆಯಾಗಿದ್ದ 5 ಮಂದಿಯ ಮೃತದೇಹ ಹೊಂಡದಲ್ಲಿ ಹೂತುಹಾಕಿದ್ದ ಸ್ಥಿತಿಯಲ್ಲಿ ಪತ್ತೆ

Update: 2021-06-30 18:19 GMT

ಭೋಪಾಲ, ಜೂ.30: ಸುಮಾರು 1 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಧ್ಯಪ್ರದೇಶದ ಒಂದೇ ಕುಟುಂಬದ 5 ಮಂದಿಯ ಮೃತದೇಹ ರಾಜ್ಯದ ದೆವಾಸ್ ಜಿಲ್ಲೆಯ ಹೊಲವೊಂದರಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಐವರನ್ನೂ ಹತ್ಯೆ ಮಾಡಿ, ಹೊಲದಲ್ಲಿ ಸುಮಾರು 10 ಅಡಿ ಹೊಂಡ ತೋಡಿ ಹೂತು ಹಾಕಲಾಗಿತ್ತು. ಬುಲ್ಡೋಜರ್ ಬಳಸಿ ಹೊಂಡದ ಮಣ್ಣು ತೆಗೆದು ಮೃತದೇಹ ಹೊರತೆಗೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

45 ವರ್ಷದ ಮಮತಾ, ಆಕೆಯ ಇಬ್ಬರು ಮಕ್ಕಳು (21 ವರ್ಷದ ರೂಪಾಲಿ ಮತ್ತು 14 ವರ್ಷದ ದಿವ್ಯಾ) ಮತ್ತು ಇಬ್ಬರು ಬಂಧುಗಳು ದೆವಾಸ್‌ನ ಮನೆಯಿಂದ ಮೇ 13ರಂದು ನಾಪತ್ತೆಯಾಗಿದ್ದರು. ಮೃತರಲ್ಲಿ ಒಬ್ಬರೊಂದಿಗೆ ಸಂಬಂಧ ಹೊಂದಿದ್ದ ಜಮೀನುದಾರ ಹಾಗೂ ಆತನ 12ಕ್ಕೂ ಅಧಿಕ ಸಹಾಯಕರು ಈ ಭಯಾನಕ ಕೃತ್ಯದ ಹಿಂದೆ ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಧಾನ ಆರೋಪಿ ಸುರೇಂದ್ರ ರಜಪೂತ್ ಹಾಗೂ ಇತರ 4 ಶಂಕಿತರನ್ನು ಬಂಧಿಸಲಾಗಿದ್ದು ಇತರ 7 ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಐವರ ಮೃತದೇಹವೂ ವಿವಸ್ತ್ರ ಸ್ಥಿತಿಯಲ್ಲಿತ್ತು. ಆರೋಪಿಗಳು ಕೊಲೆ ಮಾಡಿ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ. ಅಲ್ಲದೆ ಮೃತದೇಹದ ಮೇಲೆ ಉಪ್ಪು ಮತ್ತು ಯೂರಿಯಾ ಸುರಿದು ಬೇಗನೆ ಕೊಳೆತುಹೋಗುವಂತೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News