ಉಯಿಗರ್ ಮುಸ್ಲಿಮರನ್ನು ನಡೆಸಿಕೊಂಡಿರುವ ಬಗ್ಗೆ ಚೀನಾದ ವಾದವನ್ನು ಪಾಕ್ ಒಪ್ಪುತ್ತದೆ: ಇಮ್ರಾನ್ ಖಾನ್
ಇಸ್ಲಮಾಬಾದ್, ಜು.2: ಉಯಿಗರ್ ಮುಸ್ಲಿಮರನ್ನು ನಡೆಸಿಕೊಂಡಿರುವ ಬಗ್ಗೆ ಚೀನಾದ ಪ್ರತಿಪಾದನೆಯನ್ನು ಆ ದೇಶದೊಂದಿಗಿರುವ ಸಂಬಂಧ ಮತ್ತು ನಿಕಟತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಒಪ್ಪುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಕಮ್ಯುನಿಸ್ಟ್ ಪಕ್ಷದ 100ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಖಾನ್ ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ರನ್ನು ಶ್ಲಾಘಿಸಿದರು.
ಪಾಶ್ಚಿಮಾತ್ಯ ದೇಶಗಳಲ್ಲಿರುವ ಪ್ರಜಾಪ್ರಭುತ್ವದ ಮಾದರಿಯು ಸಮಾಜದ ಸುಧಾರಣೆಗೆ ಇರುವ ಆದರ್ಶ ಮಾದರಿ ಎಂದು ಇದುವರೆಗೆ ನಾವು ಹೇಳುತ್ತಿದ್ದೆವು. ಆದರೆ ಕಮ್ಯುನಿಷ್ಟ್ ಪಕ್ಷ ಸಮಾನಾಂತರ ಮಾದರಿಯನ್ನು ಪರಿಚಯಿಸಿದೆ ಮತ್ತು ಸಮಾಜದಲ್ಲಿರುವ ಯೋಗ್ಯರನ್ನು, ಅರ್ಹರನ್ನು ಬೆಂಬಲಿಸುವ ಮೂಲಕ ಈ ಮಾದರಿ ಪಾಶ್ಚಿಮಾತ್ಯ ಮಾದರಿಯನ್ನು ಸೋಲಿಸಿದೆ ಎಂದು ಖಾನ್ ಹೇಳಿದರು.
ಚೀನಾಕ್ಕೆ ತಾನು ಸಮಾನ ಎಂದು ಭಾವಿಸಿದರೆ ಭಾರತಕ್ಕೇ ನಷ್ಟ. ಯಾಕೆಂದರೆ ಚೀನಾ ತುಂಬಾ ಬಲಿಷ್ಟ ದೇಶ. ಚೀನಾದ ಜೊತೆ ಪೈಪೋಟಿಗೆ ಇಳಿಯುವ ಬದಲು ಸ್ನೇಹಸಂಬಂಧ ಬೆಳೆಸಿದರೆ ಭಾರತಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ. ಪೈಪೋಟಿಯಿಂದ ಹೆಚ್ಚು ನಷ್ಟವಾಗುವುದು ಭಾರತಕ್ಕೇ ಎಂದು ಇಮ್ರಾನ್ ಅಭಿಪ್ರಾಯಪಟ್ಟರು.
ಚೀನಾದ ಷಿನ್ಜಿಯಾಂಗ್ನಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಅಮಾನವೀಯ ರೀತಿಯಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಹಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಸಾಂಸ್ಕತಿಕ ಜನಸಂಖ್ಯೆಯನ್ನು ನಾಶಗೊಳಿಸುವ ಉದ್ದೇಶದಿಂದ ಚೀನಾದ ಅಧಿಕಾರಿಗಳು ಬಲವಂತದ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ, ಲೈಂಗಿಕ ದೌರ್ಜನ್ಯ ಹಾಗೂ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ.
ಇಲ್ಲಿ ಸಾವಿರಾರು ಮುಸ್ಲಿಮರು ಕರುಣಾಜನಕ, ಅಮಾನವೀಯ ಮತ್ತು ಭಯಭೀತ ಜೀವನ ನಡೆಸುತ್ತಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ‘ ದಿ ಗಾರ್ಡಿಯನ್’ ವರದಿ ಮಾಡಿದೆ. ತಮಗೆ ಇಸ್ಲಾಂ ಧರ್ಮದ ಆಚರಣೆಗಳನ್ನು ನಿರ್ವಹಿಸಲು ಮತ್ತು ಮಾತೃಭಾಷೆ ಬಳಸಲು ಅವಕಾಶ ನೀಡುತ್ತಿಲ್ಲ ಎಂದು ಮುಸ್ಲಿಮರು ಹೇಳಿರುವುದಾಗಿ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ನ ವರದಿ ಹೇಳಿದೆ.
ಹೀಗಿದ್ದರೂ, ಚೀನಾವನ್ನು ಸಮರ್ಥಿಸಿಕೊಂಡಿರುವ ಇಮ್ರಾನ್ ಖಾನ್, ಚೀನಾದ ಹೇಳಿಕೆ ಪಾಶ್ಚಿಮಾತ್ಯದ ಮಾಧ್ಯಮಗಳಲ್ಲಿ ವರದಿಯಾಗಿರುವುದಕ್ಕಿಂತ ಸಂಪೂರ್ಣ ಭಿನ್ನವಾಗಿದೆ ಎಂದಿದ್ದಾರೆ. ಖಾನ್ ಈ ರೀತಿ ಹೇಳುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ತಾನೇನೂ ತಪ್ಪು ಮಾಡಿಲ್ಲ ಎಂದು ಚೀನಾ ಹೇಳುತ್ತಿದೆ. ಇಲ್ಲಿ ನಿರ್ಮಿಸಲಾಗಿರುವ ಶಿಬಿರಗಳು ಭಯೋತ್ಪಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಮರುಶಿಕ್ಷಣ ಕೇಂದ್ರಗಳಾಗಿವೆ ಎನ್ನುತ್ತಿದೆ ಚೀನಾ. ಮೂಲಗಳ ಪ್ರಕಾರ, ಇಲ್ಲಿರುವ ಬಂಧನಾ ಶಿಬಿರಗಳಲ್ಲಿ ಮಿಲಿಯನ್ಗೂ ಅಧಿಕ ಪುರುಷ ಮತ್ತು ಮಹಿಳೆಯರನ್ನು ಇರಿಸಲಾಗಿದೆ.
ಕಾಶ್ಮೀರದಲ್ಲಿ ಇದಕ್ಕಿಂತ ಕೆಟ್ಟ ಪರಿಸ್ಥಿತಿಯಿದೆ: ಇಮ್ರಾನ್
ಆಕ್ರಮಿತ ಕಾಶ್ಮೀರ ಸೇರಿದಂತೆ ವಿಶ್ವದ ಇತರೆಡೆ ಇದಕ್ಕಿಂತ ಕೆಟ್ಟ ಪರಿಸ್ಥಿತಿಯಿದೆ. ಆದರೆ ಪಾಶ್ಚಿಮಾತ್ಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುವುದೇ ಇಲ್ಲ. ಆದರೆ ಚೀನಾದಲ್ಲಿರುವ ಪರಿಸ್ಥಿತಿಯನ್ನು ಮಾತ್ರ ಎತ್ತಿತೋರಿಸುವುದು ವರದಿಗಾರರ ಕುಟಿಲ ಬುದ್ಧಿಯನ್ನು ಪ್ರದರ್ಶಿಸುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಚೀನಾ ಯಾವತ್ತೂ ಪಾಕಿಸ್ತಾನವನ್ನು ಬೆಂಬಲಿಸಿದೆ. ಉಭಯ ದೇಶಗಳ ನಡುವಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಸುಧಾರಿಸಿದ್ದು ಚೀನಾದ ಜನತೆಗೆ ಪಾಕಿಸ್ತಾನೀಯರ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ ಎಂದು ಇಮ್ರಾನ್ ಹೇಳಿರುವುದಾಗಿ ವರದಿಯಾಗಿದೆ.