ಕೋವಿಶೀಲ್ಡ್ ಗೆ ಅನುಮೋದನೆ ನೀಡಿದ ನೆದರ್ಲ್ಯಾಂಡ್

Update: 2021-07-02 16:24 GMT

ಆಮ್ಸ್ಟರ್ಡಾಂ, ಜು.2: ನೆದರ್ಲ್ಯಾಂಡ್ ಭಾರತದ ಭಾರತ್ ಬಯೊಟೆಕ್ ನ ಉತ್ಪಾದನೆಯಾದ ಕೋವಿಶೀಲ್ಡ್ ಲಸಿಕೆಯನ್ನು ಪ್ರವಾಸಿಗರು ಪಡೆಯಬಹುದಾದ ಲಸಿಕೆಗಳ ಪಟ್ಟಿಯಲ್ಲಿ ಸೇರಿಸಿದೆ ಎಂದು ಮೂಲಗಳು ಹೇಳಿವೆ. ಯುರೋಪ್ ದೇಶಗಳು ಕೋವಿಶೀಲ್ಡ್ ಲಸಿಕೆಗೆ ಅನುಮೋದನೆ ನೀಡುವ ನಿಟ್ಟಿನಲ್ಲಿ ಕಳೆದ ಕೆಲ ದಿನಗಳಿಂದ ಭಾರತ ಸರಕಾರ ನಿರಂತರ ಒತ್ತಡ ಹೇರಿತ್ತು. ‌

ಫೈಝರ್-ಬಯೊಎನ್ಟೆಕ್, ಮೊಡೆರ್ನ, ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯ ಜೊತೆಗೆ, ಕೋವಿಶೀಲ್ಡ್ ಲಸಿಕೆಗೂ ಅನುಮತಿ ನೀಡಲಾಗಿದೆ ಎಂದು ನೆದರ್ಲ್ಯಾಂಡ್ ಸರಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ನೀಡುವ ವಿಷಯದಲ್ಲಿ ಯುರೋಪಿಯನ್ ಯೂನಿಯನ್ ಜತೆ ಮಾತುಕತೆ ನಡೆಸುವುದಾಗಿ ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಹೇಳಿಕೆ ನೀಡಿದ ಮರುದಿನ ಸ್ವಿಝರ್ಲ್ಯಾಂಡ್, ಐಸ್ಲ್ಯಾಂಡ್ ಹಾಗೂ ಯುರೋಪಿಯನ್ ಯೂನಿಯನ್ ನ 7 ದೇಶಗಳು ಸೆರಂ ಉತ್ಪಾದಿಸಿರುವ ಮತ್ತೊಂದು ಲಸಿಕೆ ಆಕ್ಸ್ಫರ್ಡ್-ಅಸ್ಟ್ರಾಝೆನೆಕಾ ಲಸಿಕೆಗೆ ಅನುಮೋದನೆ ನೀಡಿತ್ತು. 

ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್‌ ಲ್ಯಾಂಡ್, ಐರ್ಲ್ಯಾಂಡ್, ಎಸ್ಟೋನಿಯಾ ಮತ್ತು ಸ್ಪೇನ್ ದೇಶಗಳು ಕೋವಿಶೀಲ್ಡ್ ಗೆ ಅನುಮೋದನೆ ನೀಡುವುದಾಗಿ ದೃಢಪಡಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News