ಭಿಕ್ಷುಕರು, ಮನೆಯಿಲ್ಲದವರು ಕೆಲಸ ಮಾಡಬೇಕು, ಎಲ್ಲವನ್ನೂ ಸರಕಾರ ನೀಡಲಾಗುವುದಿಲ್ಲ: ಬಾಂಬೆ ಹೈಕೋರ್ಟ್‌

Update: 2021-07-03 08:22 GMT

ಮುಂಬೈ: ಮನೆಯಿಲ್ಲದ ವ್ಯಕ್ತಿಗಳು ಹಾಗೂ ಭಿಕ್ಷುಕರು ಕೆಲಸ ಮಾಡಿ ಜೀವಿಸಲು ಪ್ರಾರಂಭಿಸಬೇಕು ಹಾಗೂ ದೇಶಕ್ಕಾಗಿ ದುಡಿಯಬೇಕು. ಎಲ್ಲವನ್ನೂ ಸರಕಾರದಿಂದ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. 

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಾಂಕರ್‌ ದತ್ತಾ ಹಾಗೂ ಜಸ್ಟಿಸ್‌ ಜಿ.ಎಸ್‌ ಕುಲಕರ್ಣಿ ನೇತೃತ್ವದ ಪೀಠವು ಈ ಹೇಳಿಕೆ ನೀಡಿದೆ. ಬ್ರಿಜೇಶ್‌ ಆರ್ಯ ಎಂಬವರು ಸಲ್ಲಿಸಿದ ಅರ್ಜಿಯಲ್ಲಿ, ಮುಂಬೈ ಮಹಾನಗರ ಪಾಲಿಕೆಯು ಮನೆ ಇಲ್ಲದವರಿಗೆ ಮತ್ತು ಭಿಕ್ಷುಕರಿಗೆ ದೈನಂದಿನ ಮೂರು ಹೊತ್ತು ಪೋಷಕಾಂಶಯುಕ್ತ ಆಹಾರ, ನೀರು, ವಸತಿ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ಒದಗಿಸಬೇಕು ಎಂದು ಉಲ್ಲೇಖಿಸಲಾಗಿತ್ತು.

ಎನ್‌ಜಿಒಗಳ ಸಹಾಯದಿಂದ ಮುಂಬೈನಾದ್ಯಂತ ನಿರ್ವಸತಿಗರಿಗೆ ಹಾಗೂ ನಿರ್ಗತಿಕರಿಗೆ ಆಹಾರದ ಪ್ಯಾಕೆಟ್‌ ಗಳನ್ನು ಮಹಾನಗರ ಪಾಲಿಕೆ ಈಗಾಗಲೇ ವಿತರಿಸುತ್ತಿದೆ. ಮತ್ತು ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ ಕಿನ್‌ ಗಳನ್ನು ವಿತರಿಸಲಾಗುತ್ತಿದೆ ಎಂದು ಬಿಎಂಸಿಯು ನ್ಯಾಯಾಲಯಕ್ಕೆ ತಿಳಿಸಿತು. ಈ ಸಲ್ಲಿಕೆಯನ್ನು ಅಂಗೀಕರಿಸಿದ ನ್ಯಾಯಾಲಯ ಈ ಅರ್ಜಿಯ ಕುರಿತು ಹೆಚ್ಚಿನ ನಿರ್ದೇಶನ ಅಗತ್ಯವಿಲ್ಲ ಎಂದು ಹೇಳಿತು.

ವಸತಿಯಿಲ್ಲದವರು ಹಾಗೂ ಭಿಕ್ಷುಕರು ದೇಶಕ್ಕಾಗಿ ಸಹ ಕೆಲಸ ಮಾಡಬೇಕು. ಎಲ್ಲವನ್ನೂ ಸರಕಾರ ಅಥವಾ ರಾಜ್ಯದಿಂದ ಒದಗಿಸಲಾಗುವುದಿಲ್ಲ. ನೀವು (ಅರ್ಜಿದಾರರು) ಇಂತಹವರ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದೀರಿ ಮತ್ತು ಜನರನ್ನು ಕೆಲಸ ಮಾಡದಂತೆ ತಡೆಯುತ್ತಿದ್ದೀರಿ" ಎಂದು ಅರ್ಜಿದಾರರನ್ನು ನ್ಯಾಯಾಧೀಶರು ತರಾಎಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News