ರಫೇಲ್ ಖರೀದಿ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಆದೇಶಿಸಲು ಪ್ರಧಾನಿಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ,ಜು.3: ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆಯನ್ನು ನಡೆಸಬೇಕು ಎಂದು ಶುಕ್ರವಾರ ಆಗ್ರಹಿಸಿರುವ ಕಾಂಗ್ರೆಸ್,ಈ ವ್ಯವಹಾರದಲ್ಲಿ ಭ್ರಷ್ಟಾಚಾರದ ಕುರಿತು ಸತ್ಯವನ್ನು ಬಯಲಿಗೆಳೆಯಲು ಇದೊಂದೇ ಮಾರ್ಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದೆ ಬಂದು ತನಿಖೆಗೆ ಆದೇಶಿಸಬೇಕು ಎಂದು ಹೇಳಿದೆ. ಭಾರತದೊಂದಿಗಿನ 59,000 ಕೋ.ರೂ.ಗಳ ರಫೇಲ್ ವ್ಯವಹಾರದಲ್ಲಿ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆಗಾಗಿ ಫ್ರಾನ್ಸ್ ನ್ಯಾಯಾಧೀಶರೋರ್ವರನ್ನು ನೇಮಿಸಿದೆ ಎಂದು ಫ್ರೆಂಚ್ ತನಿಖಾ ಜಾಲತಾಣ ಮೀಡಿಯಾಪಾರ್ಟ್ ವರದಿ ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ ಈ ಆರೋಪವನ್ನು ಮಂಡಿಸಿದೆ.
ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಫ್ರೆಂಚ್ ಸರಕಾರವು ತನಿಖೆಗೆ ಆದೇಶಿಸಿರುವುದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರ ನಿಲುವನ್ನು ಎತ್ತಿಹಿಡಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕಾಂಗ್ರೆಸ್ ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲೆ ಅವರು, ವಿಷಯವು ರಾಷ್ಟ್ರೀಯ ಭದ್ರತೆ ಮತ್ತು ಅನನ್ಯತೆಗೆ ಸಂಬಂಧಿಸಿರುವುದರಿಂದ ಜೆಪಿಸಿ ಮೂಲಕ ನ್ಯಾಯಯುತ ಮತ್ತು ಸ್ವತಂತ್ರ ತನಿಖೆಯು ಏಕಮಾತ್ರ ಮಾರ್ಗವಾಗಿದೆಯೇ ಹೊರತು ಸರ್ವೋಚ್ಚ ನ್ಯಾಯಾಲಯವಲ್ಲ. ಒಪ್ಪಂದದಲ್ಲಿ ಭ್ರಷ್ಟಾಚಾರವನ್ನು ಫ್ರೆಂಚ್ ಸರಕಾರವೇ ಒಪ್ಪಿಕೊಂಡಿರುವಾಗ ಭ್ರಷ್ಟಾಚಾರ ನಡೆದಿರುವ ಭಾರತದಲ್ಲಿ ಜೆಪಿಸಿ ತನಿಖೆಯನ್ನೇಕೆ ನಡೆಸಬಾರದು ಎಂದು ಪ್ರಶ್ನಿಸಿದರು.
ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಿರೋಧದ ವಿಷಯವಲ್ಲ, ಇದು ರಾಷ್ಟ್ರದ ಭದ್ರತಾ ಕಳವಳಗಳು ಮತ್ತು ರಕ್ಷಣಾ ಒಪ್ಪಂದದಲ್ಲಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರದ ಮೂಲಕ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುವವರ ವಿರುದ್ಧದ ವಿಷಯವಾಗಿದೆ ಎಂದ ಸುರ್ಜೆವಾಲಾ,ಸಾಕ್ಷಿಗಳನ್ನು ಕರೆಸಲು ಮತ್ತು ಎಲ್ಲ ಸರಕಾರಿ ಕಡತಗಳನ್ನು ಪರಿಶೀಲಿಸಲು ಜೆಪಿಸಿಗೆ ಸಾಧ್ಯವಿದೆ,ಆದರೆ ಸರ್ವೋಚ್ಚ ನ್ಯಾಯಾಲಯ ಅಥವಾ ಕೇಂದ್ರ ಜಾಗ್ರತ ಆಯೋಗಕ್ಕೆ ಇವುಗಳನ್ನು ನೋಡಲು ಎಂದೂ ಸಾಧ್ಯವಿಲ್ಲ. ವಿಚಾರಣಾ ಪ್ರಶ್ನೆಗಳನ್ನು ಕೇಳಲು,ಸುಳ್ಳು ಹೇಳುವವವರನ್ನು ದಂಡಿಸಲು ಹಾಗೂ ಪ್ರಧಾನಿ,ರಕ್ಷಣಾ ಸಚಿವ ಅಥವಾ ರಕ್ಷಣಾ ಸಚಿವಾಲಯದ ಅಧಿಕಾರಿಗಳನ್ನು ಅಥವಾ ಇತರ ಯಾರನ್ನೂ ವಿಚಾರಣೆಗೆ ಕರೆಸಲು ಜೆಪಿಸಿಗೆ ಸಾಧ್ಯವಿದೆ. ಹೀಗಾಗಿ ರಫೇಲ್ ವ್ಯವಹಾರದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಜೆಪಿಸಿ ತನಿಖೆ ಏಕಮಾತ್ರ ಮಾರ್ಗವಾಗಿದೆ ಎಂದರು.