ಟಿಎಂಸಿಗಾಗಿ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿಯನ್ನು ಬದಲಿಸಲಿರುವ ಸೋನಿಯಾ ಗಾಂಧಿ?
ಹೊಸದಿಲ್ಲಿ: ಅಚ್ಚರಿಯ ನಡೆಯೊಂದರಲ್ಲಿ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿರುವ ಅಧೀರ್ ರಂಜನ್ ಚೌಧರಿಯನ್ನು ಬದಲಿಸಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆನ್ನಲಾಗಿದೆ. ಲೋಕಸಭೆಯ ಅಧಿವೇಶನ ಆರಂಭಕ್ಕೆ ಹದಿದೈದು ದಿನಗಳು ಬಾಕಿ ಇರುವಾಗ ಪಕ್ಷದಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಪಕ್ಷ ಬಯಸಿದೆ ಎನ್ನಲಾಗಿದ್ದು, ಈ ಪೈಕಿ ಪಕ್ಷದ ನಾಯಕ ಹುದ್ದೆ ಬದಲಾವಣೆ ಮೊದಲನೆಯದು ಎನ್ನಲಾಗಿದೆ ಎಂದು indianexpress.com ವರದಿ ಮಾಡಿದೆ.
ಬೆಹ್ರಾಂಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಚೌಧರಿ, ಇತ್ತೀಚೆಗೆ ನಡೆದ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದ ಹೊಣೆ ಹೊತ್ತಿದ್ದರು ಹಾಗೂ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರೂ ಆಗಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಪಕ್ಷದ 23 ಮುಖಂಡರು ಬಂಡಾಯದ ಬಾವುಟ ಹಾರಿಸಿದ ಸಂದರ್ಭದಲ್ಲಿ ಚೌಧರಿ ಪಕ್ಷದ ನಾಯಕತ್ವದ ಹಿಂದೆ ಬಲವಾಗಿ ನಿಂತಿದ್ದರು. ಇವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
ಚೌಧರಿಯವರನ್ನು ಈ ಹುದ್ದೆಯಿಂದ ತೆರವುಗೊಳಿಸುವುದು ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ಸಂಬಂಧ ಬೆಳೆಸುವ ಮತ್ತು ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಒಗ್ಗೂಡಿ ಹೋರಾಡುವ ಸಲುವಾಗಿ ಟಿಎಂಸಿ ಜತೆ ಸಮನ್ವಯ ಸಾಧಿಸುವ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್, ಟಿಎಂಸಿ ವಿರುದ್ಧ ಸ್ಪರ್ಧಿಸಿದ್ದರೂ, ಪಕ್ಷದ ನಾಯಕತ್ವ ಮಮತಾ ಬ್ಯಾನರ್ಜಿ ವಿರುದ್ಧ ಎಲ್ಲೂ ವಾಗ್ದಾಳಿ ನಡೆಸಿರಲಿಲ್ಲ. ಮಮತಾ ಜಯವನ್ನು ಕಾಂಗ್ರೆಸ್ ನಾಯಕತ್ವ ಸ್ವಾಗತಿಸಿತ್ತು. ಆದರೆ ಚೌಧರಿ, ಬ್ಯಾನರ್ಜಿ ಸರ್ಕಾರದ ಕಟು ಟೀಕಾಕಾರರಾಗಿದ್ದರು.
ಚೌಧರಿಯವರನ್ನು ತೆರುವುಗೊಳಿಸುವ ಮೂಲಕ, ಬಂಗಾಳದ ರಾಜ್ಯಪಾಲ ಜಗದೀಪ್ ಧನ್‍ಕರ್ ವಿರುದ್ಧ ಲೋಕಸಭೆಯಲ್ಲಿ ಸಮರಕ್ಕೆ ಮುಂದಾಗಿರುವ ಟಿಎಂಸಿಗೆ ಸದನದಲ್ಲಿ ಸಾಥ್ ನೀಡಲು ಕಾಂಗ್ರೆಸ್ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಚೌಧರಿಯವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ತಿರುವನಂತಪುರ ಸಂಸದ ಶಶಿ ತರೂರ್ ಹಾಗೂ ಆನಂದಪುರ ಸಾಹಿಬ್ ಸಂಸದ ಮನೀಶ್ ತಿವಾರಿ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.