ರಫೇಲ್ ಯುದ್ಧ ವಿಮಾನ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪ: ಕೇಂದ್ರ ಸರಕಾರದ ಮೌನ ಪ್ರಶ್ನಿಸಿದ ಕಾಂಗ್ರೆಸ್

Update: 2021-07-04 09:58 GMT

ಹೊಸದಿಲ್ಲಿ: ಭಾರತದ 59,000 ಕೋಟಿ ರೂ. ರಫೇಲ್ ಜೆಟ್ ಒಪ್ಪಂದದ ಸುತ್ತಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನರೇಂದ್ರ ಮೋದಿ ಸರಕಾರ ಮೌನವಾಗಿರುವುದಕ್ಕೆ ಕಾಂಗ್ರೆಸ್ ಇಂದು ವಾಗ್ದಾಳಿ ನಡೆಸಿದೆ. ಈಗ ಲಭ್ಯವಿರುವ ದಾಖಲೆಗಳ ಪ್ರಕಾರ ಒಪ್ಪಂದದಲ್ಲಿ ಮಧ್ಯವರ್ತಿಗೆ ಭಾರೀ ಪ್ರಮಾಣದ ಹಣವನ್ನು ಪಾವತಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಭಾರತದೊಂದಿಗೆ 59,000 ಕೋಟಿ ರೂ. ಒಪ್ಪಂದದಲ್ಲಿ ಭ್ರಷ್ಟಾಚಾರ ಹಾಗೂ ಪಕ್ಷಪಾತ ಆರೋಪದ ಕುರಿತಾಗಿ ತನಿಖೆ ನಡೆಸುವ ಹೊಣೆಯನ್ನು ಫ್ರೆಂಚ್ ನ್ಯಾಯಾಧೀಶರೊಬ್ಬರಿಗೆ ವಹಿಸಲಾಗಿದೆ ಎಂದು ರಾಷ್ಟ್ರೀಯ ಆರ್ಥಿಕ  ಪ್ರಾಸಿಕ್ಯೂಟರ್ ಗಳ ಕಚೇರಿ ಶುಕ್ರವಾರ ತಿಳಿಸಿದೆ. ರಫೇಲ್ ಯುದ್ಧ ವಿಮಾನಗಳ ಖರೀದಿ ಕುರಿತು  ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿತ್ತು. ಈ ಮೂಲಕ ರಫೇಲ್ ಯುದ್ದ ವಿಮಾನ ಒಪ್ಪಂದ ಮತ್ತೊಮ್ಮೆ ವಿವಾದದ ಮೂಲಕ ಸುದ್ದಿಯಾಗಿದೆ.

ಇಂದು ಹಿಂದಿಯಲ್ಲಿ ಅಪಹಾಸ್ಯದ ಟ್ವೀಟ್‌ ಪೋಸ್ಟ್ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಜೆಪಿಸಿ ತನಿಖೆಗೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಏಕೆ ಸಿದ್ಧರಿಲ್ಲ ಎಂದು ಪ್ರಶ್ನಿಸಿದರು.

ಇಂದು ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಪವನ್ ಖೇರಾ ಅವರು ರಫೇಲ್ ಒಪ್ಪಂದವು ಭಾರತ ಹಾಗೂ  ಫ್ರಾನ್ಸ್ ನಡುವಿನ ಅಂತರ್-ಸರಕಾರಿ ಒಪ್ಪಂದವಾಗಿದೆ ಮತ್ತು ಉಭಯ ದೇಶಗಳಲ್ಲಿ ಒಂದು ದೇಶ ತನಿಖೆಯನ್ನು ಆರಂಭಿಸಿದೆ. ಇನ್ನೊಂದು ದೇಶವು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದರು.

"ರಫೇಲ್ ಒಪ್ಪಂದದಲ್ಲಿ ಆಗಿರುವ ಭ್ರಷ್ಟಾಚಾರ, ಪ್ರಭಾವ ಬೀರುವಿಕೆ, ಅಕ್ರಮ ಹಣ ವರ್ಗಾವಣೆ, ಪಕ್ಷಪಾತದಂತಹ ವಿಷಯಗಳ ಬಗ್ಗೆ ತನಿಖೆ ನಡೆಸಲು ಫ್ರಾನ್ಸ್ ಆದೇಶಿಸಿ 24 ಗಂಟೆಗಳಾಗಿದೆ. ಇಡೀ ರಾಷ್ಟ್ರ, ಇಡೀ ಜಗತ್ತು ಈಗ ಹೊಸದಿಲ್ಲಿಯತ್ತ ನೋಡುತ್ತಿದೆ. ಏಕೆ ಮೌನ?" ಎಂದು ಖೇರಾ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News