ಹಳೆ ಟ್ವೀಟ್ ನಿಂದ ವಿವಾದಕ್ಕೆ ಸಿಲುಕಿದ ಉತ್ತರಾಖಂಡದ ನೂತನ ಸಿಎಂ ಪುಷ್ಕರ್ ಸಿಂಗ್
ಹೊಸದಿಲ್ಲಿ: ಉತ್ತರಾಖಂಡದ ಹೊಸ ಮುಖ್ಯಮಂತ್ರಿ, ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಅವರು ಆರು ವರ್ಷಗಳ ಹಿಂದೆ ಟ್ವೀಟ್ ಮಾಡಿದ್ದ ಭಾರತದ ನಕ್ಷೆಯ ವಿಚಾರಕ್ಕೆ ಸಂಬಂಧಿಸಿ ವಿವಾದಕ್ಕೆ ಸಿಲುಕಿದ್ದಾರೆ.
"ಅಖಂಡ್ ಭಾರತ್ (ಅವಿಭಜಿತ ಭಾರತ)" ಯನ್ನು ತೋರಿಸುವ ನಕ್ಷೆಯಲ್ಲಿ ಇಂದಿನ ಭಾರತದ ಪ್ರಮುಖ ಭಾಗಗಳು ಕಾಣೆಯಾಗಿವೆ.. ಟ್ವಿಟರ್ ಬಳಕೆದಾರರು ಈ ಪೋಸ್ಟ್ ಅನ್ನು ಮುಂದಿಟ್ಟುಕೊಂಡು, "ಅಖಂಡ್ ಭಾರತ್" ಹಿನ್ನೆಲೆಯಲ್ಲಿ ಬಿಳಿ ರೇಖೆಯಿಂದ ಗುರುತಿಸಲಾದ ಭಾರತೀಯ ನಕ್ಷೆಯು ಲಡಾಖ್ ನ ಕೆಲವು ಭಾಗಗಳನ್ನು, ಪ್ರಸ್ತುತ ಪಾಕಿಸ್ತಾನ ಆಕ್ರಮಿಸಿರುವ ಪ್ರದೇಶಗಳನ್ನು ಬಿಟ್ಟುಬಿಟ್ಟಿದೆ ಎಂದು ತೋರಿಸಿದ್ದಾರೆ.
ಭಾರತೀಯ ನಕ್ಷೆಯನ್ನು ತಪ್ಪಾಗಿ ತೋರಿಸಿದ ಹಲವರು ಇತ್ತೀಚೆಗೆ ತೊಂದರೆಗೆ ಸಿಲುಕಿದ್ದಾರೆ. ತೀರಾ ಇತ್ತೀಚೆಗೆ, ಟ್ವಿಟರ್ ವಿರುದ್ಧ ಎರಡು ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ವರ್ಷ, ಟ್ವಿಟರ್ ಲೇಹ್ ಅನ್ನು ಚೀನಾದ ಭಾಗವಾಗಿ ಚಿತ್ರಿಸಿತ್ತು.
ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ನಾಲ್ಕು ತಿಂಗಳಲ್ಲಿ ಉತ್ತರಾಖಂಡದ ರಾಜ್ಯದ ಮೂರನೇ ಮುಖ್ಯಮಂತ್ರಿ ಆಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಒಳಜಗಳದ ಮಧ್ಯೆ ತಿರಥ್ ಸಿಂಗ್ ರಾವತ್ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ 45 ವರ್ಷದ ಬಿಜೆಪಿಯ ಪುಷ್ಕರ್ ಸಿಂಗ್ ಅವರನ್ನು ಶನಿವಾರ ಸಿಎಂ ಹುದ್ದೆಗೆ ಹೆಸರಿಸಲಾಗಿದೆ.