ಸ್ಟ್ಯಾನ್ ಸ್ವಾಮಿ ಆರೋಗ್ಯ ಕ್ಷೀಣ, ವೆಂಟಿಲೇಟರ್ ನಲ್ಲಿ ಮಾನವಹಕ್ಕು ಹೋರಾಟಗಾರ
ಹೊಸದಿಲ್ಲಿ: ಕಳೆದ ವರ್ಷ ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ 84 ವರ್ಷದ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾ. ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯವು ರವಿವಾರ ಮುಂಜಾನೆ ಮತ್ತಷ್ಟು ಹದಗೆಟ್ಟ ನಂತರ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸ್ವಾಮಿ ಅವರನ್ನು ಮೇ 30 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾಮಿ ತೀವ್ರ ನಿಗಾ ಘಟಕದಲ್ಲಿ(ಐಸಿಯು)ಮುಂದುವರಿದಿದ್ದಾರೆ ಎಂದು ಸ್ವಾಮಿಯ ಜಾಮೀನು ಅರ್ಜಿಯನ್ನು ಆಲಿಸುತ್ತಿರುವ ಹೈಕೋರ್ಟ್‌ಗೆ ಅವರ ವಕೀಲ ಮಿಹಿರ್ ದೇಸಾಯಿ ಅವರು ಶನಿವಾರ ತಿಳಿಸಿದ್ದರು.
“ಸ್ವಾಮಿಯವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಹಾಗೂ ಅವರ ಆಮ್ಲಜನಕದ ಮಟ್ಟವು ಏರಿಳಿತಗೊಂಡಿರುವುದರಿಂದ ಅವರಿಗೆ ಉಸಿರಾಡಲು ತೊಂದರೆಯಾಗಿದೆ" ಎಂದು ದೇಸಾಯಿ ಹೇಳಿದರು.
ವೈದ್ಯಕೀಯ ಆಧಾರದ ಮೇಲೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಸ್ವಾಮಿಯವರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್. ಜೆ. ಜಮಾದರ್ ಅವರ ವಿಭಾಗೀಯ ನ್ಯಾಯಪೀಠವು ಜುಲೈ 6 ಕ್ಕೆ ಮುಂದೂಡಿದೆ. ಸ್ವಾಮಿ ಅವರಿಗೆ ಹೋಲಿಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.