ಗೋ ರಕ್ಷಣೆ ಹೆಸರಿನಲ್ಲಿ ಜನರ ಹತ್ಯೆ ಮಾಡುವವರು ಹಿಂದುತ್ವದ ವಿರೋಧಿಗಳು: ಮೋಹನ್ ಭಾಗವತ್
ಹೊಸದಿಲ್ಲಿ: ಗೋ ರಕ್ಷಣೆಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡುವವರು ಹಿಂದುತ್ವದ ವಿರುದ್ಧ ಹೋಗುತ್ತಿದ್ದಾರೆ ಎಂದು ರಾಷ್ಟ್ರಿಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ರವಿವಾರ ಹೇಳಿದ್ದಾರೆ.
ಎಲ್ಲ ಭಾರತೀಯರ ಡಿಎನ್ಎ ಒಂದೇ ಎಂದು ಪ್ರತಿಪಾದಿಸಿದ ಅವರು “ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಎಂಬ ಭಯದ ಖೆಡ್ಡಾದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ'' ಎಂದು ಮುಸ್ಲಿಮರಲ್ಲಿ ವಿನಂತಿಸಿದರು.
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಹಿಂದೂಗಳು ಅಥವಾ ಮುಸ್ಲಿಮರು ಒಬ್ಬರ ಮೇಲೊಬ್ಬರು ಪ್ರಾಬಲ್ಯ ಸಾಧಿಸುವಂತಿರಬಾರದು. ಇಲ್ಲಿ ಭಾರತೀಯರ ಪ್ರಾಬಲ್ಯ ಮಾತ್ರ ಇರಬೇಕು. ರಾಷ್ಟ್ರೀಯತೆ ದೇಶದ ಜನರಲ್ಲಿ ಏಕತೆಗೆ ಆಧಾರವಾಗಬೇಕು ಎಂದು ಹೇಳಿದರು.
“ಯಾವುದೇ ಮುಸ್ಲಿಂ ಇಲ್ಲಿ ವಾಸಿಸಬಾರದು ಎಂದು ಯಾವುದೇ ಹಿಂದೂ ಹೇಳಿದರೆ, ಆ ವ್ಯಕ್ತಿ ಹಿಂದೂ ಅಲ್ಲ. ಗೋವು ಒಂದು ಪವಿತ್ರ ಪ್ರಾಣಿ. ಆದರೆ ಬೇರೆಯವರನ್ನು ಹಲ್ಲೆ ಮಾಡುವ ಜನರು ಹಿಂದುತ್ವದ ವಿರುದ್ಧ ಹೋಗುತ್ತಿದ್ದಾರೆ. ಅಂತಹವರ ವಿರುದ್ಧ ಯಾವುದೇ ಪಕ್ಷಪಾತವಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ”ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ‘ ಹಿಂದೂಸ್ತಾನಿ ಫಸ್ಟ್, ಹಿಂದೂಸ್ತಾನ್ ಫಸ್ಟ್ ’ಎಂಬ ವಿಷಯದ ಕುರಿತು ಮಾತನಾಡುತ್ತಾ ಭಾಗವತ್ ಹೇಳಿದರು.