ಭಾರತ-ಅಮೆರಿಕಗಳ ವ್ಯೂಹಾತ್ಮಕ ಸಹಭಾಗಿತ್ವವು ಜಾಗತಿಕ ಮಹತ್ವದ್ದಾಗಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ, ಜು.4: ರವಿವಾರ ಅಮೆರಿಕದ 254ನೇ ಸ್ವಾತಂತ್ರೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಅಧ್ಯಕ್ಷ ಜೋ ಬೈಡೆನ್ ಮತ್ತು ದೇಶದ ಜನತೆಯನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು,ಉಭಯ ರಾಷ್ಟ್ರಗಳ ನಡುವಿನ ವ್ಯೂಹಾತ್ಮಕ ಸಹಭಾಗಿತ್ವವು ನಿಜಕ್ಕೂ ಜಾಗತಿಕ ಮಹತ್ವವನ್ನು ಹೊಂದಿದೆ ಎಂದು ಹೇಳಿದ್ದಾರೆ.
‘254ನೇ ಸ್ವಾತಂತ್ರೋತ್ಸವ ದಿನದಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಜನತೆಗೆ ಹೃದಯಸ್ಪರ್ಶಿ ಅಭಿನಂದನೆಗಳು. ಪ್ರಖರ ಪ್ರಜಾಪ್ರಭುತ್ವಗಳಾಗಿರುವ ಭಾರತ ಮತ್ತು ಅಮೆರಿಕ ಸ್ವಾತಂತ್ರದ ಮೌಲ್ಯಗಳನ್ನು ಹಂಚಿಕೊಂಡಿವೆ. ನಮ್ಮ ವ್ಯೂಹಾತ್ಮಕ ಸಹಭಾಗಿತ್ವವು ನಿಜಕ್ಕೂ ಜಾಗತಿಕ ಮಹತ್ವವನ್ನು ಹೊಂದಿದೆ ’ಎಂದು ತನ್ನ ಶುಭಾಶಯ ಸಂದೇಶದಲ್ಲಿ ಮೋದಿ ಹೇಳಿದ್ದಾರೆ.
ನೆರೆಯ ಅಫಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಸಂಕೀರ್ಣ ಪ್ರಕ್ರಿಯೆಯನ್ನು ಅಮೆರಿಕವು ಆರಂಭಿಸಿರುವ ಸಂದರ್ಭದಲ್ಲಿ ಭಾರತದ ಈ ಸಂದೇಶ ರವಾನೆಯಾಗಿದೆ. ಜು.2ರಂದು ಅಮೆರಿಕವು ದಿಲ್ಲಿಯಲ್ಲಿನ ತನ್ನ ರಾಯಭಾರ ಕಚೇರಿಯಲ್ಲಿ ಚಾರ್ಜ್ ಡಿ ಅಫೇರ್ಸ್ ಆಗಿ ಭಾರತೀಯ ಮೂಲದ ಅಮೆರಿಕನ್ ಅತುಲ್ ಕಶ್ಯಪ ಅವರನ್ನು ನೇಮಕಗೊಳಿಸಿತ್ತು.