ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಿಎಚ್‍ಡಿ ವಿದ್ಯಾರ್ಥಿಗೆ ಮತ್ತೆ ಭಾಗವಹಿಸಬಾರದೆಂಬ ಷರತ್ತು ವಿಧಿಸಿದ ಗುವಾಹಟಿ ಐಐಟಿ

Update: 2021-07-07 10:14 GMT

ಗುವಾಹಟಿ:  ಐಐಟಿ-ಗುವಾಹಟಿಯಲ್ಲಿ ತನ್ನ ಸಂಶೋಧನಾ ಕೆಲಸವನ್ನು ಮುಂದುವರಿಸಬೇಕಿದ್ದರೆ ಯಾವುದೇ ಪ್ರತಿಭಟನೆ ಧರಣಿಯಲ್ಲಿ ಭಾಗವಹಿಸುವುದಿಲ್ಲ ಎಂಬ ಆರು ಅಂಶಗಳ ಲಿಖಿತ ಹೇಳಿಕೆಯನ್ನು ಸಂಸ್ಥೆಯ ನಾಲ್ಕನೇ ವರ್ಷದ ಪಿಎಚ್‍ಡಿ ಸ್ಕಾಲರ್  ಹಿಮಾಂಚಲ್ ಸಿಂಗ್ (30) ಅನಿವಾರ್ಯವಾಗಿ ಸಹಿ ಹಾಕಬೇಕಾಯಿತು.

ಇಲೆಕ್ಟ್ರಾನಿಕ್ಸ್ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ತಮ್ಮ ಶಿಕ್ಷಕ ಬೃಜೇಶ್ ರೈ ಅವರ ಕಡ್ಡಾಯ ನಿವೃತ್ತಿಯನ್ನು ಪ್ರತಿಭಟಿಸಿ ಸಹಪಾಠಿಯೊಬ್ಬರ ಜತೆ ಸೇರಿ ಸಿಂಗ್ ಕಳೆದ ವರ್ಷದ ಜನವರಿ 4ರಿಂದ 7ರ ತನಕ ಉಪವಾಸ ಸತ್ಯಾಗ್ರಹ ನಡೆಸಿದ್ದಕ್ಕಾಗಿ ಒಂದು ಸೆಮೆಸ್ಟರ್ ಅವಧಿಗೆ ಡಿಬಾರ್ ಆಗಿದ್ದರು. ಸಿಂಗ್ ಅವರ ಶಿಕ್ಷಕ ಬೃಜೇಶ್ ರಾಯ್ ಅವರು ಸಂಸ್ಥೆಯ ಆಡಳಿತದ ವಿರುದ್ಧ ಹಲವಾರು ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿದ ನಂತರ  ದುರ್ನಡತೆ ಹಾಗೂ ಸಂಸ್ಥೆಯ ಮಾನಹಾನಿ ಆರೋಪದ ಮೇಲೆ ಅವರನ್ನು ಕಳೆದ ವರ್ಷದ ಜನವರಿ 1ರಂದು ಅವರನ್ನು ಕಡ್ಡಾಯವಾಗಿ ನಿವೃತಿಗೊಳಿಸಲಾಗಿತ್ತು.

ಕೋವಿಡ್ ಸಾಂಕ್ರಾಮಿಕದ ನಂತರ ಮುಚ್ಚಲ್ಪಟ್ಟಿದ್ದ ಐಐಟಿ ಈ ವರ್ಷ ತೆರೆದುಕೊಂಡಾಗ ಸಿಂಗ್ ಅವರು ಮಾರ್ಚ್ 4ರಂದು ಅಲ್ಲಿಗೆ ಆಗಮಿಸಿದ ಸಂದರ್ಭ ಅವರನ್ನು ಹಾಸ್ಟೆಲ್‍ನಿಂದ ಬಲವಂತವಾಗಿ ಹೊರಕಳುಹಿಸಲಾಗಿತ್ತು. ಮಾರ್ಚ್ 8ರಂದು ರಿಜಿಸ್ಟ್ರಾರ್ ಎಸ್ ಎಂ ಸುರೇಶ್ ಅವರಿಗೆ ಪತ್ರ ಕಳುಹಿಸಿ ಆರು ಷರತ್ತುಗಳಿಗೆ ಒಪ್ಪಿ ಲಿಖಿತ ಹೇಳಿಕೆಗೆ ಸಹಿ ಹಾಕಿದಲ್ಲಿ ಮಾತ್ರ ಪಿಎಚ್‍ಡಿ ಶಿಕ್ಷಣ ಮುಂದುವರಿಸಲು ಅನುಮತಿಸುವುದಾಗಿ ಹೇಳಿದರು. ಅವರಿಗೆ ವಿಧಿಸಲಾದ ಇತರ ಷರತ್ತುಗಳ ಪೈಕಿ ಸಾಮಾಜಿಕ ಜಾಲತಾಣದಲ್ಲಿ ಸಂಸ್ಥೆಯ ವಿರುದ್ಧ ಯಾವುದೇ ಪೋಸ್ಟ್ ಮಾಡಬಾರದು ಹಾಗೂ  ಸಂಸ್ಥೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂದು ಸೂಚಿಸಲಾಗಿದೆ. ಷರತ್ತುಗಳನ್ನು ಮೀರಿದರೆ ನೋಟಿಸ್ ನೀಡದೆ ಮತ್ತೆ ವಜಾಗೊಳಿಸುವುದಾಗಿ ಎಚ್ಚರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News