ಕೇಂದ್ರ ಸಚಿವರಾದ ಬೆನ್ನಿಗೇ ಜ್ಯೋತಿರಾದಿತ್ಯ ಸಿಂಧಿಯಾ ಫೇಸ್ ಬುಕ್ ಖಾತೆ ಹ್ಯಾಕ್
ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಫೇಸ್‌ಬುಕ್ ಖಾತೆಯನ್ನು ಬುಧವಾರ ಸಂಜೆ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.
ಸಿಂಧಿಯಾ ಅವರ ಖಾತೆಯನ್ನು ಹ್ಯಾಕ್ ಮಾಡಿದ ನಂತರ, ಸಿಂಧಿಯಾ ಅವರು ಬಿಜೆಪಿ ಹಾಗೂ ಮೋದಿ ಸರಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಳೆಯ ವೀಡಿಯೊವನ್ನು ಹ್ಯಾಕರ್ಸ್ ಪೋಸ್ಟ್ ಮಾಡಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ನ ಪ್ರಮುಖ ನಾಯಕರಾಗಿದ್ದ ಕಾಲದಲ್ಲಿದ್ದ ವೀಡಿಯೊ ಇದಾಗಿದೆ.
ಸಿಂಧಿಯಾ ಅವರ ಸೋಷಿಯಲ್ ಮೀಡಿಯಾ ತಂಡವು ಈ ವಿಷಯವನ್ನು ಕಂಡುಹಿಡಿದಿದೆ ಮತ್ತು ವಿವಾದಾತ್ಮಕ ವೀಡಿಯೊವನ್ನು ತೆಗೆದುಹಾಕಿದೆ. ಅದರ ನಂತರ ಫೇಸ್ ಬುಕ್ ಖಾತೆಯನ್ನು ಮರುಸ್ಥಾಪಿಸಲಾಗಿದೆ.
ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಸಿಂಧಿಯಾ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ
ಮಾಜಿ ಶಾಸಕ ರಮೇಶ್ ಅಗರ್ವಾಲ್ ಅವರ ದೂರಿನ ಆಧಾರದ ಮೇಲೆ ಗ್ವಾಲಿಯರ್ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಿಚಿತ ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.