ಎಲ್ಲಾ ವಯಸ್ಕರಿಗೆ ಡಿಸೆಂಬರ್ ಅಂತ್ಯದ ವೇಳೆಗೆ ಲಸಿಕೆ: ಡಾ.ಎನ್.ಕೆ.ಅರೋರ
ಹೊಸದಿಲ್ಲಿ: ಭಾರತದ ಎಲ್ಲಾ ವಯಸ್ಕರಿಗೆ ಡಿಸೆಂಬರ್ ಅಂತ್ಯದ ವೇಳೆಗೆ ಕೋವಿಡ್ ವಿರುದ್ಧ ಲಸಿಕೆ ನೀಡಲಾಗುವುದು. ಸರಕಾರವು ತನ್ನ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪಿನ ಮುಖ್ಯಸ್ಥ ಡಾ.ಎನ್.ಕೆ.ಅರೋರ ವಿಶ್ವಾಸ ವ್ಯಕ್ತಪಡಿಸಿದರು.
ಸರಕಾರವು ಗುರಿ ತಲುಪುವುದು ಮುಂಬರುವ ತಿಂಗಳುಗಳಲ್ಲಿ ನಿರೀಕ್ಷಿತ ಲಸಿಕೆ ಪೂರೈಕೆಯಲ್ಲಿನ ಹೆಚ್ಚಳವನ್ನು ಆಧರಿಸಿದೆ ಎಂದು ಅವರು ಹೇಳಿದರು. ಆದರೆ ಲಸಿಕೆ ಆಡಳಿತ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ರಾಜ್ಯಗಳು ತಮ್ಮ ಗುರಿಯನ್ನು ತಲುಪಬೇಕಾಗಿದೆ ಎಂದರು.
ಲಸಿಕೆಗಳ ಲಭ್ಯತೆಯಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದೆ ಎಂದು ಡಾ. ಅರೋರ ವಿಶೇಷ ಸಂದರ್ಶನದಲ್ಲಿ NDTVಗೆ ತಿಳಿಸಿದರು.
ಗ್ರಾಫ್ ಅನ್ನು ವಿವರಿಸಿದ ಅವರು "ಜೂನ್ ಹಾಗೂ ಜುಲೈನಲ್ಲಿ ಹೆಚ್ಚಳ ಕಂಡುಬಂದಿದೆ. ದೇಶವು ಮೇ ವರೆಗೆ ತಿಂಗಳಿಗೆ 5.6 ಕೋಟಿ ಡೋಸ್ ಗಳನ್ನು ಪಡೆದುಕೊಂಡಿದೆ. ಈಗ ಅದು 10 ರಿಂದ 12 ಕೋಟಿ ಡೋಸೇಜ್ ಪಡೆಯುತ್ತಿದೆ ಹಾಗೂ ಮುಂದಿನ ತಿಂಗಳು ಅದು 16 ರಿಂದ 18 ಕೋಟಿಗಳ ಸಮೀಪದಲ್ಲಿರಬೇಕು. ಸೆಪ್ಟೆಂಬರ್‌ನಿಂದ ನಾವು 30 ಕೋಟಿ ಪ್ಲಸ್ ಡೋಸ್‌ಗಳನ್ನು ಹೊಂದಿರಬೇಕು" ಎಂದು ಅರೋರ ಹೇಳಿದ್ದಾರೆ.