ಹೊಸ ಐಟಿ ನಿಯಮ ಪಾಲಿಸದಿದ್ದರೆ ಬಲವಂತದ ಕ್ರಮ ಕೈಗೊಳ್ಳಬಾರದು: ಕೇರಳ ಹೈಕೋರ್ಟ್
ಹೊಸದಿಲ್ಲಿ: ಹೊಸ ಐಟಿ ನಿಯಮಗಳನ್ನು ಸದ್ಯ ಪಾಲಿಸದ ಕಾರಣಕ್ಕೆ ಸುದ್ದಿ ಸಂಸ್ಥೆಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕೇರಳ ಹೈಕೋರ್ಟ್ ಇಂದು ಮಧ್ಯಂತರ ಆದೇಶ ನೀಡಿದೆ. ಈ ತೀರ್ಪಿನ ಮೂಲಕ ಕೇಂದ್ರ ಸರಕಾರದ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿರುವ ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಶನ್ (ಎನ್ ಬಿಎ) ಸ್ವಲ್ಪ ನಿರಾಳವಾಗಿದೆ.
ನ್ಯಾಯಮೂರ್ತಿ ಪಿ.ಬಿ.ಸುರೇಶ್ ಕುಮಾರ್ ಅವರ ಏಕ-ನ್ಯಾಯಾಧೀಶರ ಪೀಠವು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಹೊಸ ಐಟಿ ನಿಯಮಗಳ ಅಡಿಯಲ್ಲಿ ನಿಬಂಧನೆಗಳನ್ನು ಪಾಲಿಸದ ಎನ್‌ಬಿಎಯ ಭಾಗವಾಗಿರುವ ಸುದ್ದಿ ಸಂಸ್ಥೆಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿದೆ..
ಹೊಸ ನಿಯಮಗಳು ಸರಕಾರಿ ಅಧಿಕಾರಿಗಳಿಗೆ ಮಾಧ್ಯಮ ಹಕ್ಕುಗಳನ್ನು ಅಸಮಂಜಸವಾಗಿ ನಿರ್ಬಂಧಿಸಲು ಹೆಚ್ಚಿನ ಅಧಿಕಾರವನ್ನು ನೀಡುತ್ತವೆ ಎಂದು ಅರ್ಜಿಯಲ್ಲಿ, ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಶನ್ ತಿಳಿಸಿತ್ತು.
ಮಾಧ್ಯಮದ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು "ಅಸಮಂಜಸವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ನಿರ್ಬಂಧಿಸಲು" ನಿಯಮವು ಸರಕಾರಿ ಅಧಿಕಾರಿಗಳಿಗೆ "ಅತಿಯಾದ ಅಧಿಕಾರವನ್ನು" ನೀಡುತ್ತದೆ ಎಂಬ ಕಾರಣಕ್ಕೆ ಎನ್ ಬಿಎ ಐಟಿ ನಿಯಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021, ಕಾನೂನಿನ ಮುಂದೆ ಸಮಾನತೆಯ ಬಗ್ಗೆ ಸಂವಿಧಾನದ 14 ನೇ ವಿಧಿ ಮತ್ತು ಯಾವುದೇ ವೃತ್ತಿಯನ್ನು ಅಭ್ಯಾಸ ಮಾಡುವ ಅಥವಾ ಯಾವುದೇ ಕಾರ್ಯವನ್ನು ಮುಂದುವರಿಸುವ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ 19 ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಎನ್ ಬಿ ಎ ಹೇಳಿಕೆಯಲ್ಲಿ ತಿಳಿಸಿದೆ.