ಅಮಿತ್ ಶಾ ಸಹಾಯಕ ಸಚಿವನ ಶೈಕ್ಷಣಿಕ ಅರ್ಹತೆ ಕುರಿತು ನೂತನ ವಿವಾದ ಸೃಷ್ಟಿ
ಕೊಲ್ಕತ್ತಾ: ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಬುಧವಾರದ ಸಂಪುಟ ವಿಸ್ತರಣೆ ವೇಳೆ ಅಧಿಕಾರ ವಹಿಸಿಕೊಂಡಿರುವ ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಸಂಸದ ನಿಶಿತ್ ಪ್ರಮಾಣಿಕ್ ಅವರ ಶೈಕ್ಷಣಿಕ ಅರ್ಹತೆ ಕುರಿತು ವಿವಾದವೇರ್ಪಟ್ಟಿದೆ. ಪ್ರಮಾಣಿಕ್ ಅವರು ತಮ್ಮ ಚುನಾವಣಾ ಅಫಿಡವಿಟ್‍ನಲ್ಲಿ ನೀಡಿರುವ ಮಾಹಿತಿ ಹಾಗೂ ಸಂಸತ್ತಿನ ವೆಬ್‍ಸೈಟ್‍ನಲ್ಲಿರುವ ಮಾಹಿತಿಯಲ್ಲಿರುವ ವ್ಯತ್ಯಾಸವೇ ಇದಕ್ಕೆ ಕಾರಣವಾಗಿದೆ.
ಮೂವತ್ತೈದು ವರ್ಷದ ಪ್ರಮಾಣಿಕ್ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸ್ಪರ್ಧಿಸಿ ಗೆದ್ದರೂ ತಮ್ಮ ಲೋಕಸಭಾ ಸದಸ್ಯತನ ಉಳಿಸುವ ಸಲುವಾಗಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಅವರು ವಿಧಾನಸಭಾ ಚುನಾವಣೆ ಸ್ಪರ್ಧಿಸುವಾಗ ಮಾರ್ಚ್ 18ರಂದು ಒಂದು ಅಫಿಡವಿಟ್ ಸಲ್ಲಿಸಿದ್ದರೆ ಲೋಕಸಭೆಗೆ ಮಾರ್ಚ್ 25, 2019ರಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಈ ಎರಡೂ ಅಫಿಡವಿಟ್‍ಗಳಲ್ಲಿ ಅವರು ಮಾಧ್ಯಮಿಕ್ ಪರೀಕ್ಷಾ ಅಥವಾ ಸೆಕೆಂಡರಿ ಪರೀಕ್ಷೆ ತಮ್ಮ ಅತ್ಯುನ್ನತ ಶೈಕ್ಷಣಿಕ ಅರ್ಹತೆ ಎಂದು ಬರೆದಿದ್ದರೆ ಲೋಕಸಭಾ ವೆಬ್ ಸೈಟ್ ನಲ್ಲಿ ಅವರ ಶೈಕ್ಷಣಿಕ ಅರ್ಹತೆ ಬಿಸಿಎ ಎಂದು ಬರೆಯಲಾಗಿದ್ದು, ಸಂಸ್ಥೆಯ ಹೆಸರನ್ನು ಬಲಕುರ ಜೂನಿಯರ್ ಬೇಸಿಕ್ ಸ್ಕೂಲ್ ಎಂದು ನೀಡಲಾಗಿದೆ.
ಆದರೆ ಬಿಸಿಎ ಅಥವಾ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಶಿಕ್ಷಣ ಪಡೆಯಲು ಹೈಯರ್ ಸೆಕೆಂಡರಿ ಅಥವಾ 12ನೇ ತರಗತಿ ತೇರ್ಗಡೆ ಹೊಂದಿರುವುದು ಅಗತ್ಯವಾಗಿದೆ.
ಪಶ್ಚಿಮ ಬಂಗಾಳದ ದಿನ್ಹತ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಮಾಣಿಕ್ ಅವರು ಕೇವಲ 57 ಅಂತರದಿಂದ ಸೋಲಿಸಿದ್ದ ಟಿಎಂಸಿಯ ಮಾಜಿ ಶಾಸಕ ಉದಯನ್ ಗುಹಾ ಕೂಡ ಪ್ರಾಮಾಣಿಕ್ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
"ಮಾರ್ಚ್‍ನಲ್ಲಿ ಅವರ ಅತ್ಯುನ್ನತ ಶೈಕ್ಷಣಿಕ ಅರ್ಹತೆ ಸೆಕೆಂಡರಿ ಪರೀಕ್ಷೆ ಎಂದಾಗಿದೆ. ಆದರೆ ಅವರು ತೇರ್ಗಡೆ ಹೊಂದಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಈಗ ಜುಲೈಯಲ್ಲಿ ಅವರಿಗೆ ಪದವಿಯಿದೆ. ಹೈಯರ್ ಸೆಕೆಂಡರಿ ಪರೀಕ್ಷೆ ತೇರ್ಗಡೆಯಾಗದೆ ಹೇಗೆ ಪದವಿ ಪಡೆದಿದ್ದಾರೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಕೂಚ್ ಬಿಹಾರ್ ಕ್ಷೇತ್ರದ ಮಾಜಿ ಟಿಎಂಸಿ ಸಂಸದ ಪಾರ್ಥ ಪ್ರತಿಮ್ ರಾಯ್ ಕೂಡ ಇದೇ ಪ್ರಶ್ನೆಯನ್ನೆತ್ತಿದ್ದಾರೆ. ಅವರು ಬಿಸಿಎ ಶಿಕ್ಷಣ ಪಡೆದ ಶಾಲೆ ಕೇವಲ 5ನೇ ತರಗತಿ ತನಕ ಶಿಕ್ಷಣ ನೀಡುತ್ತಿರುವಾಗ ಬಿಸಿಎ ಪದವಿ ಹೇಗೆ ನೀಡಲು ಸಾಧ್ಯ ಎಂದು ಅವರು ಕೇಳಿದ್ದಾರೆ.
ಈ ಶಾಲೆ ಪ್ರಮಾಣಿಕ್ ಅವರ ಮನೆಯಿರುವ ಭೇಟಗುರಿ ಪ್ರದೇಶದಿಂದ 8 ಕಿಮೀ ದೂರದ ಬುರೀರ್ಹತ್ ಎಂಬಲ್ಲಿದೆ. ಆದರೆ ಶಾಲೆ ಅವರಿಗೆ ಪದವಿ ನೀಡಿದೆ ಎಂದು ಪ್ರಾಮಾಣಿಕ್ ಅವರ ವ್ಯಕ್ತಿಪರಿಚಯದಲ್ಲಿಲ್ಲ, ಬದಲು ಕೋರ್ಸ್ ಆ ಶಾಲೆಯಲ್ಲಿ ನಡೆಸಲಾಗಿತ್ತು ಎಂದಷ್ಟೇ ಇದೆ.