ಹವಾಮಾನ ಬದಲಾವಣೆ ಕಾರಣಗಳಿಂದ ಪ್ರತಿವರ್ಷ 7.4 ಲಕ್ಷ ಮಂದಿ ಸಾವು: ಲ್ಯಾನ್ಸೆಟ್‌ ವರದಿ

Update: 2021-07-09 08:25 GMT

ಹೊಸದಿಲ್ಲಿ: ಭಾರತದಲ್ಲಿ ಪ್ರತಿ ವರ್ಷ ಸುಮಾರು 7.4 ಲಕ್ಷ ಸಾವುಗಳಿಗೆ ಅಸಹಜ  ಅಧಿಕ ಉಷ್ಣಾಂಶ ಅಥವಾ ಕನಿಷ್ಠ ಉಷ್ಣಾಂಶ ಕಾರಣವಾಗಿದೆ ಎಂದು ಹೇಳಬಹುದು ಎಂದು ದಿ ಲ್ಯಾನ್ಸೆಟ್ ಪ್ಲ್ಯಾನೆಟರಿ ಹೆಲ್ತ್ ಜರ್ನಲ್ ಪ್ರಕಟಿಸಿದ ಅಧ್ಯಯನ ವರದಿ ತಿಳಿಸಿದೆ.

ಆಸ್ಟ್ರೇಲಿಯಾದ ಮೋನಶ್ ವಿವಿಯ ಸಂಶೋಧಕರ ನೇತೃತ್ವದಲ್ಲಿ ಅಂತರಾಷ್ಟ್ರೀಯ ತಜ್ಞರ ತಂಡವೊಂದು ಈ ಅಧ್ಯಯನ ನಡೆಸಿದ್ದು ವಾರ್ಷಿಕ 50 ಲಕ್ಷ ಹೆಚ್ಚುವರಿ ಸಾವುಗಳು ಅಸೂಕ್ತ ಹವಾಮಾನದಿಂದ ಉಂಟಾಗಿವೆ ಎಂದು ಅದು ಕಂಡುಕೊಂಡಿದೆ.

ಜುಲೈ 7 ರಂದು ಪ್ರಕಟಗೊಂಡ ಈ ಅಧ್ಯಯನ ವರದಿ ಪ್ರಕಾರ 2000ರಿಂದ 2019 ಅವಧಿಯಲ್ಲಿ ಎಲ್ಲಾ ಪ್ರಾಂತ್ಯಗಳಲ್ಲಿ ಸಂಭವಿಸಿದ ಸಾವುಗಳಿಗೂ ಅಧಿಕ ಉಷ್ಣಾಂಶಕ್ಕೂ ಸಂಬಂಧವಿದೆ. ಹವಾಮಾನ ಬದಲಾವಣೆಯಿಂದ  ಉಂಟಾದ ಗ್ಲೋಬಲ್ ವಾರ್ಮಿಂಗ್ ನಿಂದ ಭವಿಷ್ಯದಲ್ಲಿ ಇನ್ನಷ್ಟು ಸಾವುಗಳು ಸಂಭವಿಸಬಹುದು ಎಂದು ವರದಿ ಸುಳಿವು ನೀಡಿದೆ.

ಭಾರತದಲ್ಲಿ  ಪ್ರತಿ ವರ್ಷ ಅತಿಯಾದ ಕಡಿಮೆ ತಾಪಮಾನದಿಂದ  ಸುಮಾರು 6,55,400 ಸಾವುಗಳು ಸಂಭವಿಸಿರಬಹುದು ಹಾಗೂ ಅತ್ಯಧಿಕ ತಾಪಮಾನದಿಂದಾಗಿ 83,700 ಸಾವುಗಳು ಸಂಭವಿಸಿರಬಹುದು ಎಂದು ವರದಿ ತಿಳಿಸಿದೆ.

ಜಾಗತಿಕವಾಗಿ ಸಂಭವಿಸುವ ಒಟ್ಟು ಸಾವುಗಳ ಪೈಕಿ ಶೇ 9.43 ಸಾವುಗಳಿಗೂ ಹವಾಮಾನಕ್ಕೂ ನಂಟಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News