ಯುಎಪಿಎ ಆರೋಪಿ ಗುಲ್ಫಿಶಾ ಫಾತಿಮಾ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್‌

Update: 2021-07-09 14:42 GMT
Photo: Twitter

ಹೊಸದಿಲ್ಲಿ,ಜು.9: ದಿಲ್ಲಿ ದಂಗೆ ಪ್ರಕರಣದಲ್ಲಿ ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಗುಲ್ಫಿಷಾ ಫಾತಿಮಾ ಬಂಧನವು ಕಾನೂನುಬಾಹಿರವಾಗಿದೆ ಎಂದು ದೂರಿ ಆಕೆಯ ಪರವಾಗಿ ಸೋದರ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು,ಈ ಅರ್ಜಿಯು ಸಂಪೂರ್ಣವಾಗಿ ಅಸಂಗತವಾಗಿದೆ ಮತ್ತು ಅಂಗೀಕಾರಾರ್ಹವಲ್ಲ ಎಂದು ಹೇಳಿತು.
 
ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಗೆ ಸಂಬಂಧಿಸಿದಂತೆ ಸಲ್ಲಿಸುವಂತಿಲ್ಲ. ನಾಪತ್ತೆಯಾಗಿರುವ ಅಥವಾ ಕಾನೂನುಬಾಹಿರ ಬಂಧನದಲ್ಲಿರುವ ವ್ಯಕ್ತಿಯ ಹಾಜರಾತಿಯನ್ನು ಕೋರಿ ಅದನ್ನು ಸಲ್ಲಿಸಲಾಗುತ್ತದೆ. ನ್ಯಾಯಾಲಯದ ಮುಂದಿರುವ ವಾಸ್ತವಾಂಶಗಳಂತೆ ಫಾತಿಮಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಅವರ ಬಂಧನವನ್ನು ಕಾನೂನುಬಾಹಿರ ಎನ್ನುವಂತಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರ ಪೀಠವು,ವಿಚಾರಣಾ ನ್ಯಾಯಾಲಯವು ಹೊರಡಿಸಿರುವ ಆದೇಶವು ಫಾತಿಮಾರಿಗೆ ಅಸಮಾಧಾನವನ್ನುಂಟು ಮಾಡಿದ್ದರೆ ಸೂಕ್ತ ವೇದಿಕೆಯಲ್ಲಿ ಅದನ್ನು ಪ್ರಶ್ನಿಸಲು ಅವರಿಗೆ ಕಾನೂನು ಮಾರ್ಗವಿದೆ. ಈ ಅರ್ಜಿಯು ಸಂಪೂರ್ಣವಾಗಿ ಅಪ್ರಸ್ತುತವಾಗಿದೆ ಮತ್ತು ವಿಚಾರಣೆಗೆ ಅಂಗೀಕಾರಾರ್ಹವಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿತು.
  
ಕಳೆದ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ದಂಗೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನನ್ನು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಿರುವುದು ಕಾನೂನುಬಾಹಿರವಾಗಿದೆ,ಹೀಗಾಗಿ ತನ್ನನ್ನು ಬಿಡುಗಡೆಗೊಳಿಸಬೇಕು ಎಂದು ತನ್ನ ಸೋದರನ ಮೂಲಕ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಫಾತಿಮಾ ಪ್ರತಿಪಾದಿಸಿದ್ದರು.

ಈ ಪ್ರಕರಣದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯು ಸ್ವೀಕಾರಾರ್ಹವಲ್ಲ,ಹೀಗಾಗಿ ಅರ್ಜಿಯನ್ನು ಹಿಂದೆಗೆದುಕೊಳ್ಳುತ್ತೀರಾ ಎಂಬ ನ್ಯಾಯಾಲಯದ ಪ್ರಶ್ನೆಗೆ ಫಾತಿಮಾ ಪರ ವಕೀಲರು,ಹಾಗೆ ಮಾಡದಂತೆ ತನಗೆ ಸೂಚಿಸಲಾಗಿದೆ ಎಂದು ಉತ್ತರಿಸಿದರು.
ಫಾತಿಮಾ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯು ಅಂಗೀಕಾರಾರ್ಹವಲ್ಲ. ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಮತ್ತು ವೆಚ್ಚದೊಡನೆ ಅರ್ಜಿಯನ್ನು ವಜಾ ಮಾಡಬೇಕು ಎಂದು ದಿಲ್ಲಿ ಪೊಲೀಸರ ಪರ ವಕೀಲರು ವಾದಿಸಿದರು.

ಫಾತಿಮಾರ ಸೋದರ ಸಲ್ಲಿಸಿದ್ದ ಇಂತಹುದೇ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಉಚ್ಚ ನ್ಯಾಯಾಲಯವು ಕಳೆದ ವರ್ಷ ವಜಾಗೊಳಿಸಿತ್ತು ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಫಾತಿಮಾರನ್ನು ಕಳೆದ ವರ್ಷದ ಎ.11ರಂದು ಬಂಧಿಸಲಾಗಿದ್ದು,ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ದಿಲ್ಲಿ ದಂಗೆಗಳಿಗೆ ಸಂಬಂಧಿಸಿದ ಇತರ ಮೂರು ಪ್ರಕರಣಗಳಲ್ಲಿಯೂ ಅವರು ಆರೋಪಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News