ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರಕಾರಕ್ಕೆ ಕೇರಳ ಹೈಕೋರ್ಟ್ ನೋಟಿಸ್

Update: 2021-07-09 14:42 GMT

ಕೊಚ್ಚಿ, ಜು. 9: ವರದಕ್ಷಿಣೆ ನಿಷೇಧ ಕಾಯ್ದೆ, 1961 ಅನ್ನು ತಿದ್ದುಪಡಿ ಮಾಡುವಂತೆ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ಕುರಿತಂತೆ ಕೇರಳ ಉಚ್ಚ ನ್ಯಾಯಾಲಯ ಶುಕ್ರವಾರ ರಾಜ್ಯ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ. 

ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿಲ್ಲ ಯಾಕೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ನೇತೃತ್ವದ ನ್ಯಾಯಪೀಠ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ. ವರದಕ್ಷಿಣೆ ಕಿರುಕುಳದ ಸಾವು ಆಗಾಗ ವರದಿಯಾಗುತ್ತಿದ್ದರೂ ವರದಕ್ಷಿಣೆ ನಿಷೇಧ ಅಧಿಕಾರಿಯನ್ನು ಯಾಕೆ ನೇಮಕ ಮಾಡಿಲ್ಲ ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿದೆ. ತಾವು ಯಾವುದೇ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ಎಲ್ಲ ಸರಕಾರಿ ನೌಕರರು ಘೋಷಣೆ ಸಲ್ಲಿಸಲು ನಿರ್ದೇಶನ ನೀಡುವಂತೆ ಕೋರಿ ವಿಕ್ರಮ್ ಸಾರಾಬಾಯಿ ಸಯನ್ಸ್ ಫೌಂಡೇಶನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಂದಿರಾ ರಾಜನ್ ಅವರು ಈ ಮನವಿ ಸಲ್ಲಿಸಿದ್ದರು. 

‘‘ವರದಕ್ಷಿಣೆ ಒಂದು ಸಾಮಾಜಿಕ ಕಳಂಕವಾಗಿದ್ದು, ಮಹಿಳೆಯರ ಮೇಲೆ ಊಹಿಸಲಾಗದ ಚಿತ್ರಹಿಂಸೆ ಹಾಗೂ ಅಪರಾಧಕ್ಕೆ ಕಾರಣವಾಗುತ್ತದೆ. ಈ ಪಿಡುಗು ಸಮಾಜದ ಎಲ್ಲಾ ವರ್ಗಗಳಲ್ಲಿ ಅಮಾಯಕ ಮಹಿಳೆಯರ ಜೀವ ಹಾನಿಗೆ ಕಾರಣವಾಗಿದೆ’’ ಎಂದು ದೂರು ಪ್ರತಿಪಾದಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News