ಕೇರಳ: ಮತ್ತೆ ಝಿಕಾ ವೈರಸ್ ನ 14 ಪ್ರಕರಣಗಳು ಪತ್ತೆ

Update: 2021-07-09 17:04 GMT
ಫೋಟೊ ಕೃಪೆ: NDTV

ಕೊಚ್ಚಿ, ಜು. 9: ಕೇರಳದಲ್ಲಿ ಝಿಕಾ ವೈರಸ್ನ ಮೊದಲ ಪ್ರಕರಣ ಪತ್ತೆಯಾದ ದಿನದ ಬಳಿಕ ಮತ್ತೆ 14 ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲವೂ ತಿರುವನಂತಪುರ ಜಿಲ್ಲೆಯಿಂದ ವರದಿಯಾಗಿದೆ. ಮೊದಲ ಪ್ರಕರಣ ಪಾರಸ್ಸಾಲದ 24ರ ಹರೆಯದ ಗರ್ಭಿಣಿ ಮಹಿಳೆಯೋರ್ವರಲ್ಲಿ ಪತ್ತೆಯಾಗಿದ್ದರೆ, ಅನಂತರದ ಪ್ರಕರಣಗಳು ಆರೋಗ್ಯ ಕಾರ್ಯಕರ್ತರಲ್ಲಿ ಪತ್ತೆಯಾಗಿದೆ. ಈ ರೋಗಿಗಳ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿ ಕೊಡಲಾಗಿತ್ತು. ಅದರ ವರದಿ ಬಂದಿದ್ದು, ಎಲ್ಲರಿಗೂ ಝೀಕಾ ವೈರಸ್ ಸೋಂಕು ದೃಢಪಟ್ಟಿದೆ. ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ‌

ಝೀಕಾ ವೈರಸ್ನ ಮೊದಲ ಪ್ರಕರಣ ಗುರುವಾರ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಕೀಟಶಾಸ್ತ್ರ ಹಾಗೂ ರೋಗಗಳ ಪರಿವೀಕ್ಷಣಾ ಘಟಕದ ರೋಗವಾಹಕಗಳ ನಿಯಂತ್ರಣ ಅಧಿಕಾರಿ 24 ವರ್ಷದ ಗರ್ಭಿಣಿ ವಾಸಿಸುತ್ತಿರುವ ಪಾರಸ್ಸಾಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅವರು ಯಾವುದೇ ಪ್ರಯಾಣ ನಡೆಸಿಲ್ಲ. ಅವರ ನಿವಾಸ ಕೇರಳ-ತಮಿಳುನಾಡು ಗಡಿಯಿಂದ ದೂರವಿಲ್ಲ. ಸೊಳ್ಳೆ ಕಡಿತದ ಪ್ರಕರಣಗಳ ಮೇಲೆ ಗಮನ ಇರಿಸುವಂತೆ ಹಾಗೂ ಹೊಗೆ ಹಾಕುವ ಮೂಲಕ ವೈರಾಣುಗಳನ್ನು ನಾಶಗೊಳಿಸುವ ಕಾರ್ಯ ನಡೆಸುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿಯ ಪರಿಶೀಲನೆ ನಡೆಸಲು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News