ತ್ರಿಪುರಾದಲ್ಲಿ ಹೆಚ್ಚುತ್ತಿರುವ ಡೆಲ್ಟಾ ಪ್ಲಸ್ ಪ್ರಕರಣಗಳು
ಅಗರ್ತಲ, ಜು.10: ತ್ರಿಪುರಾದಿಂದ ಶುಕ್ರವಾರ ಪಶ್ಚಿಮ ಬಂಗಾಳಕ್ಕೆ ಜೆನೋಮ್ ಸೀಕ್ವೆನ್ಸ್‌ಗಾಗಿ ಕಳುಹಿಸಲಾಗಿದ್ದ 151 ಪ್ರಕರಣಗಳ ಪೈಕಿ ಅರ್ಧಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಾಸ್-ಕೋವ್-2 ವೈರಸ್‌ನ ಡೆಲ್ಟಾ ಪ್ಲಸ್ ಪ್ರಬೇಧ ಪತ್ತೆಯಾಗಿದೆ. ಇದು ದೇಶದಲ್ಲಿ ಕೊರೋನ ವೈರಸ್ ಸೋಂಕಿನ ಮೂರನೇ ಅಲೆಯ ಸೂಚನೆ ಎಂಬ ಭೀತಿ ಎದುರಾಗಿದೆ.
ಪರೀಕ್ಷೆಗಾಗಿ ಕಳುಹಿಸಿದ್ದ 151 ಮಾದರಿಗಳ ಪೈಕಿ 90 ಪ್ರಕರಣಗಳಲ್ಲಿ ಡೆಲ್ಟಾ ಪ್ಲಸ್ ಪ್ರಬೇಧಕ್ಕೆ ಪಾಸಿಟಿವ್ ಫಲಿತಾಂಶ ಕಂಡುಬಂದಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ.
ತ್ರಿಪುರಾ 151 ಆರ್‌ಟಿ-ಪಿಸಿಆರ್ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್‌ಗಾಗಿ ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಟ್ಟಿತ್ತು ಎಂದು ಕೋವಿಡ್-19 ನೋಡಲ್ ಅಧಿಕಾರಿ ಡಾ.ದೀಪ್ ದೆಬ್ಬರ್ಮಾ ಹೇಳಿದ್ದಾರೆ. ಈ ಪೈಕಿ 90 ಮಾದರಿಗಳಲ್ಲಿ ಡೆಲ್ಟಾ ಪ್ಲಸ್ ಪ್ರಬೇಧ ಕಂಡುಬಂದಿದ್ದು, ಇದು ಆತಂಕಕಾರಿ ಅಂಶ ಎಂದು ಅವರು ಹೇಳಿದರು.
ಈಗಾಗಲೇ 35 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 174 ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ಪ್ರಬೇಧ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ದೃಢಪಡಿಸಿತ್ತು. ಮಹಾರಾಷ್ಟ್ರ, ದಿಲ್ಲಿ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನಲ್ಲಿ ಅಧಿಕ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿತ್ತು.
ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ದಿಯೋರಿಯಾದಲ್ಲಿ ಮೊದಲ ಬಾರಿಗೆ ಗುರುವಾರ ಎರಡು ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿದ್ದವು. ಶಕ್ರವಾರ 107 ಮಾದರಿಗಳಲ್ಲಿ ಈ ಪ್ರಭೇಧ ಕಂಡುಬಂದಿದೆ. ಈ ನಡುವೆ ಕೋವಿಡ್-19ನ ಹೊಸ ಪ್ರಭೇಧ ’ಕಪ್ಪ’ ಪ್ರಕರಣಗಳು ಕೂಡಾ ರಾಜ್ಯದಲ್ಲಿ ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.