ಉತ್ತರಪ್ರದೇಶ: ನಾಮಪತ್ರ ಸಲ್ಲಿಕೆ ಸಂದರ್ಭದ ಹಿಂಸಾಚಾರ; ರಾಹುಲ್, ಪ್ರಿಯಾಂಕಾ, ಮಾಯಾವತಿ ಖಂಡನೆ

Update: 2021-07-10 17:28 GMT

ಹೊಸದಿಲ್ಲಿ, ಜು.10: ಉತ್ತರಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಅಧ್ಯಕ್ಷರ ಹುದ್ದೆಗೆ ನಾಮಪತ್ರ ಸಲ್ಲಿಸುವ ಸಂದರ್ಭ ನಡೆದ ಹಿಂಸಾಚಾರ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರ ಹದಗೆಟ್ಟಿದೆ ಎಂದಿದ್ದಾರೆ.

ಉತ್ತರಪ್ರದೇಶದಲ್ಲಿ ಹಿಂಸಾಚಾರ ಎಂಬ ಪದದ ಅರ್ಥವನ್ನು ಅದ್ಭುತ ಕೆಲಸ ಎಂದು ಬದಲಾಯಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮಹಿಳೆಯೊಬ್ಬರು ನಾಮಪತ್ರ ಸಲ್ಲಿಸಲು ಅಡ್ಡಿಪಡಿಸಿದ ಬಿಜೆಪಿ ಸರಕಾರ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, ಜೊತೆಗೆ ಮಹಿಳೆಯೊಂದಿಗೆ ಹಲವರು ಅನುಚಿತವಾಗಿ ವರ್ತಿಸುವ ಘಟನೆಯ ವೀಡಿಯೊ ದೃಶ್ಯವನ್ನೂ ಟ್ವೀಟ್ ಮಾಡಿದ್ದಾರೆ. 

ಕೆಲ ವರ್ಷದ ಹಿಂದೆ ಅತ್ಯಾಚಾರ ಸಂತ್ರಸ್ತೆಯೊಬ್ಬರು ಬಿಜೆಪಿ ಶಾಸಕರ ವಿರುದ್ಧ ಧ್ವನಿ ಎತ್ತಿದಾಗ, ಆಕೆಯನ್ನು ಕುಟುಂಬದ ಸದಸ್ಯರ ಸಹಿತ ಕೊಲೆ ಮಾಡುವ ಪ್ರಯತ್ನ ನಡೆದಿತ್ತು. ಈಗ ಮಹಿಳೆ ನಾಮಪತ್ರ ಸಲ್ಲಿಕೆಗೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಎಲ್ಲಾ ಮಿತಿಯನ್ನೂ ಮೀರಿದೆ. ಅದೇ ಸರಕಾರ, ಅದೇ ವರ್ತನೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ. ಈಗಿನ ಬಿಜೆಪಿ ಸರಕಾರದ ಆಡಳಿತದಲ್ಲೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. 

ಲಖೀಂಪುರ್ ಖೇರಿಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡಿರುವುದು ನಾಚಿಕೆಗೇಡಿನ ವಿಷಯ. ಅವರ ಪ್ರಕಾರ ನ್ಯಾಯಪರಿಪಾಲನೆ ಮತ್ತು ಪ್ರಜಾಪ್ರಭುತ್ವ ಎಂದರೆ ಇದೇ ಆಗಿರಬಹುದು’ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ. ಈಗ ಅಝಮ್ಗಢದಲ್ಲಿ ನಡೆದಂತೆ, ಚಂದೌಲಿ ಜಿಲ್ಲೆಯ ಬರ್ಥರ ಖುರ್ಡ್ ಗ್ರಾಮದಲ್ಲಿಯೂ ದಲಿತರ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಹಾಗಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿನ ದಲಿತ ಸಚಿವರು ಯಾಕೆ ಸೊಲ್ಲೆತ್ತುತ್ತಿಲ್ಲ. 

ಬಿಜೆಪಿಯವರಿಗೆ ದಲಿತರ ಮೇಲಿರುವ ಪ್ರೀತಿ ಇದೇ ಆಗಿರಬಹುದೇ ಎಂದವರು ಪ್ರಶ್ನಿಸಿದ್ದಾರೆ. ಸ್ಥಳೀಯ ಸಂಸ್ಥೆ ಅಧ್ಯಕ್ಷರ ಹುದ್ದೆಗೆ ನಾಮಪತ್ರ ಸಲ್ಲಿಕೆ ಸಂದರ್ಭ ಉತ್ತರಪ್ರದೇಶದ ಹಲವೆಡೆ ವ್ಯಾಪಕ ಹಿಂಸಾಚಾರ ನಡೆದಿತ್ತು. ಲಖೀಂಪುರ ಖೇರಿಯಲ್ಲಿ ನಾಮಪತ್ರ ಸಲ್ಲಿಕೆ ಸಂದರ್ಭ ಮಹಿಳಾ ಅಭ್ಯರ್ಥಿಯೊಬ್ಬರೊಂದಿಗೆ ಅನುಚಿತವಾಗಿ ನಡೆದುಕೊಂಡ ಪ್ರಕರಣ ನಡೆದಿದ್ದು, ಇದಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News