ಜುಲೈ 22ರಿಂದ 200 ಜನರಿಂದ ಸಂಸತ್ ಸಮೀಪ ಪ್ರತಿಭಟನೆ: ರಾಕೇಶ್ ಟಿಕಾಯತ್

Update: 2021-07-10 17:40 GMT

ಹೊಸದಿಲ್ಲಿ, ಜು. 9: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಜುಲೈ 22ರಿಂದ 200ಕ್ಕೂ ಅಧಿಕ ಜನರು ಸಂಸತ್ತಿನ ಸಮೀಪ ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ಅವರು ಶನಿವಾರ ಮಾಹಿತಿ ನೀಡಿದ್ದಾರೆ. ‘‘ಒಂದು ವೇಳೆ ಕೇಂದ್ರ ಸರಕಾರ ಕೃಷಿ ಕಾಯ್ದೆಗಳ ಬಗ್ಗೆ ಚರ್ಚಿಸಲು ಬಯಸುವುದಾದರೆ, ನಾವು ಮಾತುಕತೆ ಸಿದ್ಧ. ಆದರೆ, ಮಾತುಕತೆ ನಡೆಯದೇ ಇದ್ದರೆ ಅಥವಾ ಫಲಿತಾಂಶ ಫಲಪ್ರದವಾಗದೇ ಇದ್ದರೆ, ಅನಂತರ ನಾವು ಜುಲೈ 22ರಿಂದ ನಮ್ಮ 200 ಜನರೊಂದಿಗೆ ಸಂಸತ್ತಿನ ಸಮೀಪ ಪ್ರತಿಭಟನೆ ನಡೆಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ. ‌

ಕೃಷಿ ಕಾಯ್ದೆಗಳ ಕುರಿತು ಸರಕಾರದೊಂದಿಗೆ ಮಾತುಕತೆ ನಡೆಸಲು ರೈತರು ಸಿದ್ಧ ಎಂದು ಟಿಕಾಯತ್ ಗುರುವಾರ ತಿಳಿಸಿದ್ದರು. ಆದರೆ, ನಿಶ್ಯರ್ಥವಾಗಿ ಮಾತುಕತೆ ನಡೆಸಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಇತರ ಆಯ್ಕೆಗಳನ್ನು ಚರ್ಚಿಸಲು ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಸಿದ್ಧ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನೀಡಿದ್ದ ಹೇಳಿಕೆಗೆ ರಾಕೇಶ್ ಟಿಕಾಯತ್ ಈ ಪ್ರತಿಕ್ರಿಯೆ ನೀಡಿದರು. 

ಈ ವರ್ಷದ ಗಣರಾಜ್ಯೋತ್ಸವದ ಘಟನೆಯ ಕುರಿತು ಮಾತನಾಡಿದ ಟಿಕಾಯತ್, ‘‘ನೂತನ ಕೃಷಿ ಕಾಯ್ದೆಗಳ ಕುರಿತ ವಿವಾದವನ್ನು ವಿಶ್ವಸಂಸ್ಥೆಯ ಗಮನಕ್ಕೆ ತರುತ್ತೇವೆ ಎಂದು ನಾವು ಹೇಳಿಲ್ಲ. ಜನವರಿ 26ರಂದು ನಡೆದ ಘಟನೆ ಕುರಿತ ಪ್ರಶ್ನೆಗಳಿಗೆ ನಾವು ಪ್ರತಿಕ್ರಿಯಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಲು ಯಾವುದಾದರೂ ತನಿಖಾ ಸಂಸ್ಥೆಗಳು ಇವೆಯೇ? ಹಾಗೆ ಮಾಡದೇ ಇದ್ದರೆ, ನಾವು ಈ ವಿಷಯವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುತ್ತೇವೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News