ಯುರೋ 2020 'ಗೋಲ್ಡನ್ ಬೂಟ್' ಜಯಿಸಿದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ

Update: 2021-07-12 06:49 GMT

ಲಂಡನ್: ಪೋರ್ಚುಗಲ್ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯುರೋ 2020 ರಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಿರಬಹುದು. ಆದರೆ ಅದು ಪಂದ್ಯಾವಳಿಯಲ್ಲಿ ಅಗ್ರ ಸ್ಕೋರರ್ ಸ್ಥಾನ ಗಳಿಸುವುದಕ್ಕೆ  ಅಡ್ಡಿಯಾಗಲಿಲ್ಲ.

ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ರೊನಾಲ್ಡೊ ಐದು ಗೋಲುಗಳನ್ನು ಗಳಿಸಿದ್ದರು.  ಝೆಕ್ ರಿಪಬ್ಲಿಕ್ ಆಟಗಾರ ಪ್ಯಾಟ್ರಿಕ್ ಶಿಕ್ ಕೂಡ ಐದು ಗೋಲುಗಳನ್ನು ಗಳಿಸಿದ್ದಾರೆ. ಆದಾಗ್ಯೂ, ಅಸಿಸ್ಟ್‌ಗಳ ಟೈ-ಬ್ರೇಕರ್ ಮೂಲಕ ಪೋರ್ಚುಗಲ್ ಫಾರ್ವರ್ಡ್ ಆಟಗಾರ 'ಗೋಲ್ಡನ್ ಬೂಟ್' ಪ್ರಶಸ್ತಿಯನ್ನು ಗೆದ್ದುಕೊಂಡರು.

ರೊನಾಲ್ಡೊ ಅವರು ಜರ್ಮನಿ ವಿರುದ್ಧ ಪಂದ್ಯದಲ್ಲಿ ಒಂದು ಬಾರಿ ಗೋಲು ಅವಕಾಶ ಸೃಷ್ಟಿಸಿದ್ದರೆ,  ಪ್ಯಾಟ್ರಿಕ್  ಶಿಕ್ ಒಂದೂ ಗೋಲು ಅವಕಾಶ ಸೃಷ್ಟಿಸದೆ ಪಂದ್ಯಾವಳಿಯನ್ನು ಮುಗಿಸಿದ್ದರು. ಪಂದ್ಯಾವಳಿಯಲ್ಲಿ ಒಟ್ಟು ನಾಲ್ಕು ಗೋಲು ಗಳಿಸಿರುವ  ಫ್ರಾನ್ಸ್‌ನ ಕರೀಮ್ ಬೆಂಝೆಮಾ ಮೂರನೇ ಸ್ಥಾನದಲ್ಲಿದ್ದಾರೆ.

ರೊನಾಲ್ಡೊ ಹಂಗೇರಿ ವಿರುದ್ಧ 3-0 ಅಂತರದಿಂದ ಗೆದ್ದ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ  ಗಳಿಸಿದ ಎರಡು ಗೋಲುಗಳೊಂದಿಗೆ ಯುರೋ 2020 ರಲ್ಲಿ ತನ್ನ ಗೋಲಿನ ಖಾತೆಯನ್ನು ತೆರೆದಿದ್ದರು. ಯುರೋ ಫೈನಲ್ಸ್ ನಲ್ಲಿ ಒಟ್ಟು  11  ಗೋಲು ಗಳಿಸಿ ಹೊಸ ದಾಖಲೆ ನಿರ್ಮಿಸಿದರು.

ಜರ್ಮನಿಯ ವಿರುದ್ಧ ಪಂದ್ಯದಲ್ಲಿ ಆರಂಭಿಕ ಗೋಲಿನೊಂದಿಗೆ ಅವರು ತಮ್ಮ ಒಟ್ಟು ಗೋಲಿನ ಸಂಖ್ಯೆಗೆ  ಹೆಚ್ಚಿಸಿದರು. ನಂತರ ಫ್ರಾನ್ಸ್‌ನೊಂದಿಗಿನ 2-2 ಡ್ರಾನಲ್ಲಿ ಕೊನೆಗೊಂಡಿದ್ದ ಪಂದ್ಯದಲ್ಲಿ  ಪೆನಾಲ್ಟಿ ಸ್ಥಾನದಿಂದ ಎರಡು ಬಾರಿ ಗೋಲು ಬಾರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News