ಹಿಂದುತ್ವ ಮಾದರಿಯ ಏಕರೂಪ ನಾಗರಿಕ ಸಂಹಿತೆ ಮಹಿಳೆಯರಿಗೆ ಇನ್ನಷ್ಟು ಕೆಟ್ಟದಾಗಿ ಪರಿಣಮಿಸಬಹುದು

Update: 2021-07-12 08:30 GMT

ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯ ಪ್ರತಿಪಾದಕರು ಹೆಚ್ಚಾಗಿ ‘ಲವ್ ಜಿಹಾದ್’ ಮಿಥ್ಯೆಯಲ್ಲಿ ಹೆಚ್ಚಿನ ನಂಬಿಕೆಯನ್ನು ಹೊಂದಿರುವವರಾಗಿರುತ್ತಾರೆ ಎನ್ನುವುದು ಒಂದು ವಿಚಿತ್ರ ವಿದ್ಯಮಾನವಾಗಿದೆ. ‘ಲವ್ ಜಿಹಾದ್’ ಎನ್ನುವುದು ಸುಳ್ಳಿನ ಕಂತೆ ಎನ್ನುವುದು ಅದರ ಬಗ್ಗೆ ಸಿಟ್ಟಿನಿಂದ ಗುಡುಗುವವರಿಗೂ ಚೆನ್ನಾಗಿ ಗೊತ್ತಿರುತ್ತದೆ. ‘ಲವ್ ಜಿಹಾದ್’ ಎಂಬ ಸುಳ್ಳಿನ ಬುನಾದಿಯಲ್ಲಿರುವುದು ಆಧುನಿಕತೆಯೊಂದಿಗಿನ ಮೂಲಭೂತ ಅಸ್ವಸ್ಥತೆ. ಒಂದೇ ಗುಂಪಿನೊಳಗೆ ಅಥವಾ ಸಮುದಾಯದೊಳಗೆ ವಿವಾಹವು ಪಂಥೀಯತೆಯ ಬೆನ್ನೆಲುಬಾಗಿದೆ. ಅಂತರ್ಧರ್ಮೀಯ ಮದುವೆಗಳು ಪಂಥೀಯತೆಗೆ ಸಹಜ ಬೆದರಿಕೆಗಳಲ್ಲಿ ಒಂದಾಗಿದೆ.

‘ಲವ್ ಜಿಹಾದ್’ ಕಾನೂನುಗಳು ಮದುವೆಗಾಗಿ ‘ಬಲವಂತದ ’ ಮತಾಂತರದ ಕೃತ್ಯವನ್ನು ಅಪರಾಧವನ್ನಾಗಿಸುತ್ತವೆ. ಯುಸಿಸಿ ಇಂತಹ ಕಾನೂನುಗಳಿಗೆ ಅಂತ್ಯವನ್ನು ಹಾಡುತ್ತದೆ. ಪ್ರಾಯಶಃ ಮದುವೆಯ ಪ್ರಕ್ರಿಯೆ ಮತ್ತು ಕಾನೂನು ಬದ್ಧತೆಗಳು ಎಲ್ಲರಿಗೂ ಒಂದೇ ಆದಾಗ ಮತಾಂತರಕ್ಕೆ ಯಾವುದೇ ತಾರ್ಕಿಕತೆ ಇರುವುದಿಲ್ಲ,ವಿಶೇಷ ವಿವಾಹಗಳ ಕಾಯ್ದೆಯಡಿ 30 ದಿನಗಳ ಮುಂಚಿತ ನೋಟಿಸ್ ನೀಡುವ ಅಗತ್ಯವಿಲ್ಲ ಮತ್ತು ಮಾನ್ಯವಾದ ಮದುವೆಗೆ ಅಗತ್ಯ ಧಾರ್ಮಿಕ ವಿಧಿಗಳ ಬಗ್ಗೆ ಯಾವುದೇ ಗೊಂದಲಗಳಿರುವುದಿಲ್ಲ. ಸ್ವಾತಂತ್ರದ ಆ ಸ್ವರ್ಗದಲ್ಲಿ ನನ್ನ ದೇಶವು ಎದ್ದೇಳಲಿ. ಆಗ ‘ಲವ್ ಜಿಹಾದ್’ ಕುರಿತು ಕಳವಳಗಳು ಮತ್ತು ಈ ಮಿಥ್ಯಾ ಕೆಡುಕನ್ನು ತಡೆಯಲು ರೂಪಿಸಲಾಗಿರುವ ಕಾನೂನುಗಳು ಖಂಡಿತ ಅಗತ್ಯವಾಗುವುದಿಲ್ಲ.

‘ಲವ್ ಜಿಹಾದ್’ ಎಂಬ ಸುಳ್ಳಿನ ಪ್ರತಿಪಾದಕರು ಯುಸಿಸಿಯ ಈ ಮಾದರಿಯೊಂದಿಗೆ ಖುಷಿಯಾಗಿರುವುದಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವಿನಾಶಕಾರಿ ‘ಲವ್ ಜಿಹಾದ್’ ಮಿಥ್ಯೆಯ ಹಿಂದಿನ ಪರಿಕಲ್ಪನೆಗಳು ಪುರುಷ ಪ್ರಾಧಾನ್ಯ,ಪಂಥೀಯ, ಕೋಮುವಾದಿ ಮತ್ತು ಪ್ರತಿಗಾಮಿಯಾಗಿವೆ. ಧರ್ಮ,ಸಮುದಾಯ ಮತ್ತು ಜಾತಿಗಳ ಸಾಂಪ್ರದಾಯಿಕ ತಡೆಗೋಡೆಗಳು ನಿಧಾನವಾಗಿ ಮಾಯವಾಗುತ್ತಿವೆ ಮತ್ತು ಯುಸಿಸಿಯನ್ನು ಅನುಷ್ಠಾನಿಸುವ ಕಾಲವೀಗ ಬಂದಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಇತ್ತೀಚಿಗಷ್ಟೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆದರೆ ದಿಲ್ಲಿ ಉಚ್ಚ ನ್ಯಾಯಾಲಯದ ಚಿಂತನೆಯ ಪ್ರಗತಿಪರ ಯುಸಿಸಿ ಸಾಕಾರಗೊಳ್ಳುವಂತೆ ಕಂಡುಬರುತ್ತಿಲ್ಲ.

 ಯುಸಿಸಿ (ಯುನಿಫಾರ್ಮ್‌ ಸಿವಿಲ್‌ ಕೋಡ್) ಪರ ಮತ್ತು ವಿರುದ್ಧ ಅಭಿಪ್ರಾಯಗಳಿವೆ. ಕೇಂದ್ರ ಸರಕಾರವು ಯುಸಿಸಿಯನ್ನು 2019ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಪ್ರಕಟಿತ ತನ್ನ ಪ್ರಣಾಳಿಕೆಯಲ್ಲಿ ಘೋಷಿತ ಅಜೆಂಡಾದ ಭಾಗವನ್ನಾಗಿಸಿದೆ. ಯುಸಿಸಿ ಅನಿವಾರ್ಯ ಎಂದು ಸರಕಾರದ ಬೆಂಬಲಿಗರು ಹೇಳುತ್ತಾರೆ. ಯುಸಿಸಿಯು ಅಲ್ಪಸಂಖ್ಯಾತ ವರ್ಗಗಳ ಧಾರ್ಮಿಕ ಪದ್ಧತಿಗಳು ಮತ್ತು ಅವುಗಳ ವೈಯಕ್ತಿಕ ಕಾನೂನುಗಳಿಗೆ ನೀಡಲಾಗಿರುವ ಸಾಂವಿಧಾನಿಕ ಖಾತರಿಗಳನ್ನು ಉಲ್ಲಂಘಿಸುವುದರಿಂದ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಜಾತ್ಯತೀತ ಚಿಂತಕರು ಅದನ್ನು ವಿರೋಧಿಸುತ್ತಾರೆ. ಈ ಚರ್ಚೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ ಮತ್ತು ಅದನ್ನು ಇಲ್ಲಿ ಹೇಳಬೇಕಾದ ಅಗತ್ಯವಿಲ್ಲ. ಯುಸಿಸಿ ಬರುತ್ತದೆ ಎಂದು ಭಾವಿಸಿದರೆ ಅದು ಹೇಗಿರಬಹುದು?

ಯುಸಿಸಿಯ ಬೆಂಬಲಿಗರು ಅದಕ್ಕಾಗಿ ಉತ್ಸಾಹದಿಂದ ಹಾತೊರೆಯುತ್ತಿರಬಹುದು,ಆದರೆ ಈ ಯುಸಿಸಿ ಹೇಗಿರಲಿದೆ ಎನ್ನುವ ಸ್ಪಷ್ಟತೆಯಿಲ್ಲ. ಸಾರ್ವಜನಿಕ ಘೋಷಣೆಗಳು ಮತ್ತು ಈ ಬೆಂಬಲಿಗರ ಸಾಮಾನ್ಯ ಪ್ರವೃತ್ತಿಗಳಿಂದ ಹೇಳುವುದಾದರೆ ಯುಸಿಸಿ ಶಾಸ್ತ್ರೀಯ ಕಾನೂನಿನ ನೆರಳಿನಡಿ ರೂಪುಗೊಳ್ಳುವಂತೆ ಕಾಣುತ್ತದೆ. ಆದರೆ ಆಧುನಿಕ ಭಾರತದಲ್ಲಿ ಸಾಂಪ್ರದಾಯಿಕ ಶಾಸ್ತ್ರೀಯ ಕಾನೂನನ್ನು ಮಾನ್ಯ ಮಾಡುವವರು ಇದ್ದಾರೆಯೇ?

 ಹಿಂದು ಕಾನೂನುಗಳ ಸುಧಾರಣೆಗಾಗಿ ಹಿಂದು ಸಂಹಿತೆಯನ್ನು ತರುವ ಮುನ್ನ ಅಂದರೆ 1955ರ ಮೊದಲು ಭಾರತದಲ್ಲಿ ಮಹಿಳೆಯರಿಗೆ ವಿಚ್ಛೇದನ,ಆಸ್ತಿ ಮತ್ತು ವೈಯಕ್ತಿಕ ಸ್ವಾತಂತ್ರದ ಹಕ್ಕುಗಳು ಇರಲಿಲ್ಲ. ಈಗ ಈ ಹಕ್ಕುಗಳನ್ನು ಅವರು ಹೊಂದಿದ್ದಾರೆ. ಮಹಿಳೆಯರಿಗೆ ‘ರಕ್ಷಣೆ’ಯ ಅಗತ್ಯವಿದೆಯೇ ಹೊರತು ಸ್ವಾತಂತ್ರವಲ್ಲ ಎಂದು ಬಿಜೆಪಿಯ ಮುಖ್ಯಮಂತ್ರಿ ಆದಿತ್ಯನಾಥ ಅವರು ಬಹಿರಂಗವಾಗಿ ನೀಡಿದ್ದ ಹೇಳಿಕೆ ಮತ್ತು ಇತ್ತೀಚಿಗೆ ಹುದ್ದೆಯಿಂದ ತೆಗೆಯಲ್ಪಟ್ಟಿರುವ ಇನ್ನೋರ್ವ ಬಿಜೆಪಿ ಮುಖ್ಯಮಂತ್ರಿ ಮಹಿಳೆಯರು ಹರಿದ ಜೀನ್ಸ್ ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎದುರಾಗಿದೆ ಎಂದು ವ್ಯಕ್ತಪಡಿಸಿದ್ದ ತೀವ್ರ ಹತಾಶೆಯನ್ನು ಪರಿಗಣಿಸಿದರೆ ಬಿಜೆಪಿಯು ತನ್ನ ಕಾರ್ಯಕರ್ತರ ನಡುವೆ ಸ್ತ್ರೀದ್ವೇಷಿಗಳೊಂದಿಗೆ ಆರಾಮವಾಗಿರುವಂತಿದೆ.

 ಬಿಜೆಪಿಯ ಸೈದ್ಧಾಂತಿಕ ಪೋಷಕ ಆರೆಸ್ಸೆಸ್ ಈಗಲೂ ತನ್ನ ಕಾರ್ಯಕರ್ತರ ಶ್ರೇಣಿಗಳಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುತ್ತಿಲ್ಲ ಮತ್ತು ಪ್ರತ್ಯೇಕ ಮಹಿಳಾ ಘಟಕಗಳನ್ನು ಹೊಂದಿರಲು ಆದ್ಯತೆ ನೀಡುತ್ತಿದೆ. ಈ ಮಹಿಳಾ ಘಟಕ ಪ್ರಭಾವ,ನಿಲುವು ಅಥವಾ ಗೋಚರತೆಯಲ್ಲಿ ಯಾವುದೇ ರೀತಿಯಲ್ಲಿಯೂ ಪುರುಷ ಕಾರ್ಯಕರ್ತರಿಗೆ ಸಾಟಿಯಾಗಿಲ್ಲ. ಬಿಜೆಪಿಯ ನಾಯಕಿಯರು ರಾಜಕೀಯವಾಗಿ ಲಾಭದಾಯಕವಾಗಿದ್ದಾಗ ಮಾತ್ರ ಮಹಿಳೆಯರ ವಿರುದ್ಧದ ಹಿಂಸೆಯ ಬಗ್ಗೆ ಮಾತನಾಡುತ್ತಾರೆ ಮತ್ತು ಇಂತಹ ಹಿಂಸಾಚಾರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆದಾಗ ಖಂಡಿತವಾಗಿಯೂ ಮಾತನಾಡುವುದಿಲ್ಲ. ಬಿಜೆಪಿಯಡಿ ಲಿಂಗ-ನ್ಯಾಯದ ಯುಸಿಸಿಯ ಸಾಧ್ಯತೆಗಳಿಲ್ಲ.

 ಆದರೂ ಬಿಜೆಪಿಯ ಯುಸಿಸಿ ಪರಿಕಲ್ಪನೆಯು ನಿಜಕ್ಕೂ ಲಿಂಗ-ನ್ಯಾಯವನ್ನು ಒಳಗೊಂಡಿರುತ್ತದೆ ಮತ್ತು ವೈವಾಹಿಕ ಕಾನೂನು, ಉತ್ತರಾಧಿಕಾರ,ನಿರ್ವಹಣೆ,ಪೋಷಕತ್ವ ಮತ್ತು ದತ್ತು ಪಡೆಯುವಿಕೆಯ ವಿಷಯಗಳಲ್ಲಿ ಧಾರ್ಮಿಕ ಗುರುತಿನ ವಾಸ್ತವಗಳನ್ನು ಅಳಿಸುತ್ತದೆ ಎಂದು ಭಾವಿಸಿದರೆ ಅದು ‘ಲವ್ ಜಿಹಾದ್ ’ಕಥನಕ್ಕೆ ಏನು ಮಾಡುತ್ತದೆ? ಅಂತರ್ಧರ್ಮೀಯ ಮದುವೆಗಳು ಸರಕಾರವು ಜಾತಿಧರ್ಮಗಳ ಭೇದವಿಲ್ಲದೆ ಮಾನ್ಯತೆನ್ನು ನೀಡಿರುವ ಕೇವಲ ಮದುವೆಗಳಾಗಿರುವ ಯುಸಿಸಿ ಅಡಿ ಈ ದೇಶದಲ್ಲಿ ‘ಲವ್ ಜಿಹಾದ್’ ಎಂಬ ಮಿಥ್ಯೆಯು ಸಹ ಅಸ್ತಿತ್ವದಲ್ಲಿ ಇರಬಹುದೇ?


ಯುಸಿಸಿಯ ಹಿಂದುತ್ವ ಮಾದರಿಯು ಸಾಂವಿಧಾನಿಕ ಕಾನೂನು ಸತ್ವಪರೀಕ್ಷೆಯನ್ನು ಗೆಲ್ಲುವುದೇ?
  
ಹಿಂದುತ್ವ ಪ್ರತಿಪಾದಕರ ಚಿಂತನೆಯ ಯುಸಿಸಿ ವಿಫಲಗೊಳ್ಳಲಿದೆ. ಅದು ಖಂಡಿತವಾಗಿಯೂ ಸಾಂವಿಧಾನಿಕ ಕಾನೂನು ಸತ್ವಪರೀಕ್ಷೆಯನ್ನು ಗೆಲ್ಲುವುದಿಲ್ಲ. ಅದು ಚುನಾವಣೆಗಳ ಜನಪ್ರಿಯ ಪ್ರಜಾಸತ್ತಾತ್ಮಕ ಪರೀಕ್ಷೆಯಲ್ಲಿಯೂ ಗೆಲ್ಲುವುದಿಲ್ಲ ಎಂದು ಯಾರಾದರೂ ಆಶಿಸಬಹುದು. ನಮಗೆ ಲಿಂಗ ನ್ಯಾಯದ ಅಗತ್ಯವಿದೆ ಮತ್ತು ಅದು ಈಗ ಅಗತ್ಯವಾಗಿದೆ. ಇದರಲ್ಲಿ ಚೌಕಾಶಿಯ ಮಾತಿಲ್ಲ. ಆದರೂ ಸ್ವಾತಂತ್ರದ ಹೆಸರಿನಲ್ಲಿ ನಮ್ಮ ವಾಕ್ ಸ್ವಾತಂತ್ರವನ್ನು ನಿರ್ಬಂಧಿಸುವ,ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನಮ್ಮನ್ನು ಅಭದ್ರರನ್ನಾಗಿಸುವ ಮತ್ತು ಏಕತೆಯ ಹೆಸರಿನಲ್ಲಿ ನಮ್ಮನ್ನು ವಿಭಜಿಸುವ ಸರಕಾರವನ್ನು ನಾವು ಎದುರಿಸುತ್ತಿದ್ದೇವೆ. ಯುಸಿಸಿಯಂತಹ ಉಪಕ್ರಮದೊಂದಿಗೆ ಈ ಸರಕಾರವನ್ನು ನಂಬುವಂತಿಲ್ಲ.

ಭಾರತೀಯ ಕುಟುಂಬ ಕಾಯ್ದೆಯಡಿ ಜೀವನಾಂಶ,ಮಕ್ಕಳಿಗೆ ಬೆಂಬಲ ಮತ್ತು ದತ್ತು ಈ ವಿಷಯಗಳನ್ನು ಜಾತ್ಯತೀತಗೊಳಿಸಲಾಗಿದೆ. ಕೌಟುಂಬಿಕ ಹಿಂಸೆ ಕಾಯ್ದೆಯಡಿ ಎಲ್ಲ ಮಹಿಳೆಯರೂ ಜೀವನಾಂಶ ಮತ್ತು ಮಕ್ಕಳ ಕಸ್ಟಡಿಯ ಹಕ್ಕು ಮಂಡಿಸಲು ಸ್ವತಂತ್ರರಾಗಿದ್ದಾರೆ. ಏಕರೂಪತೆಯ ಕೊರತೆಯು ವಿವಾಹದ ಹಕ್ಕು,ವಿಚ್ಛೇದನ ಪ್ರಕ್ರಿಯೆ ಮತ್ತು ಉತ್ತರಾಧಿಕಾರ ವಿಷಯಗಳಂತಹ ಕುಟುಂಬ ಕಾಯ್ದೆಯ ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಂಡಿದೆ. ಇವು ಜೀವಂತ ಅನುಭವದ ಆಪ್ತ ವಿಷಯಗಳಾಗಿವೆ ಮತ್ತು ಲೇಖನಿಯ ಒಂದು ಹೊಡೆತದಿಂದ ಇವುಗಳನ್ನು ಬದಲಿಸಲು ಬಯಸುವುದು ಅಪೇಕ್ಷಣೀಯವಲ್ಲ, ಸಾಧ್ಯವೂ ಅಲ್ಲ, ವಿಶೇಷವಾಗಿ ಪ್ರಗತಿಪರ ತತ್ವಗಳಿಗೆ ವಿರುದ್ಧವಾದ ವಿಶ್ವ ದೃಷ್ಟಿಕೋನವನ್ನು ಹೊಂದಿರುವ ಸರಕಾರದ ಕೈಯಲ್ಲಿ ಈ ಲೇಖನಿ ಇರುವಾಗ. ಭಿನ್ನ ಧ್ವನಿಗಳನ್ನೆತ್ತುವ ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮತ್ತು ಅತ್ಯಾಚಾರದ ಬೆದರಿಕೆಗಳು ಪ್ರತಿದಿನವೂ ಹರಿದಾಡುತ್ತಿರುವಾಗ ಲಿಂಗ ನ್ಯಾಯವನ್ನು ನಿರೀಕ್ಷಿಸುವುದು ಸುಲಭವಲ್ಲ ಎಂಬಂತೆ ಕಾಣುತ್ತದೆ. ಭಾರತದಲ್ಲಿ,ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಹಿಂಸಾಚಾರಗಳು ಯಾರನ್ನೇ ಆದರೂ ದುರ್ಬಲಗೊಳಿಸುವಷ್ಟು ಭೀಕರವಾಗಿವೆ.

ಸಶಕ್ತ ಸ್ವತಂತ್ರ ಮಹಿಳೆಯರಿಗಾಗಿ ದಿಲ್ಲಿ ಉಚ್ಚ ನ್ಯಾಯಾಲಯದ ಚಿಂತನೆಯ ಯುಸಿಸಿಯನ್ನು ಏಕೀಕರಿಸುವ ಭರವಸೆಯು ಮಹಿಳೆಯರನ್ನು ದುರ್ಬಲಗೊಳಿಸಲು ಬಯಸುವ ‘ಲವ್ ಜಿಹಾದ್’ನ ಜನಪ್ರಿಯ ಹಿಂದುತ್ವ ಮಿಥ್ಯೆಗೆ ವಿರುದ್ಧವಾಗಿದೆ. ಭಾರತದಲ್ಲಿಯ ಯಾವುದೇ ಸಮುದಾಯದ ಮಹಿಳೆಗೂ ಅದು ಇನ್ನಷ್ಟು ಕೆಟ್ಟದ್ದನ್ನು ಮಾಡಲಿದೆ. 66 ವರ್ಷಗಳಿಂದಲೂ ಸ್ಥಿರವಾಗಿ ಸುಧಾರಣೆಯನ್ನು ಕಂಡುತ್ತ ಬಂದಿರುವ ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರವನ್ನು ಹಿಮ್ಮುಖಗೊಳಿಸಬಹುದು ಎನ್ನುವುದು ಪ್ರಚಲಿತ ಸರಕಾರ ಮತ್ತು ಅದರ ಆಡಳಿತ ಸಿದ್ಧಾಂತವು ಒಡ್ಡಿರುವ ಬೆದರಿಕೆಯಾಗಿದೆ. ನಾವು ಇರುವ ಸ್ಥಿತಿಯು ಆದರ್ಶದಿಂದ ತುಂಬ ದೂರವಿದೆ. ಹಿಂದುತ್ವದ ಯುಜಿಸಿಯು ಅದನ್ನು ಇನ್ನಷ್ಟು ಹದಗೆಡಿಸುತ್ತದೆ.

Writer - ಸರೀಮ್ ನವೀದ್ (Thewire.in)

contributor

Editor - ಸರೀಮ್ ನವೀದ್ (Thewire.in)

contributor

Similar News