×
Ad

ತನ್ನ ಮೂರು ತಿಂಗಳ ಮಗುವನ್ನು 50,000 ರೂ.ಗೆ ಮಾರಾಟ ಮಾಡಿ ಅಪಹರಣದ ಕಥೆ ಕಟ್ಟಿದ ಮಹಿಳೆಯ ಬಂಧನ

Update: 2021-07-12 20:19 IST
ಸಾಂದರ್ಭಿಕ ಚಿತ್ರ

ಗೋರಖ್‌ಪುರ: ಮಹಿಳೆಯೊಬ್ಬಳು ತನ್ನ ಮೂರು ತಿಂಗಳ ಗಂಡು ಮಗುವನ್ನು 50,000 ರೂ.ಗೆ ಮಾರಾಟ ಮಾಡಿದ್ದು, ಬಳಿಕ ಘಟನೆಯನ್ನು ಮುಚ್ಚಿಹಾಕಲು ಮಗುವಿನ ಅಪಹರಣದ ಕಥೆಯನ್ನು ಕಟ್ಟಿದ್ದಾಳೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ  ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ, ಘಟನೆ ನಡೆದ ಎರಡು ಗಂಟೆಗಳಲ್ಲಿ ಮಗುವನ್ನು  ಪತ್ತೆ ಹಚ್ಚಲಾಗಿದೆ.

ಮಗುವಿನ  ತಾಯಿ ಹಾಗೂ ಮಗುವನ್ನು ಖರೀದಿಸಿದ ಇನ್ನೋರ್ವ ಮಹಿಳೆಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಸಂಜೆ ಗೋರಖನಾಥ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಲಾಹಿಬಾಗ್ ಪ್ರದೇಶದ ನಿವಾಸಿ ಸಲ್ಮಾ ಖತೂನ್ ತನ್ನ ಮಗನನ್ನು ಅಪಹರಿಸಲಾಗಿದೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ರಸೂಲ್‌ಪುರ ಪ್ರದೇಶದ ಮದುವೆ ಮಂಟಪವೊಂದರ ಬಳಿ ತನ್ನ ಮಗನನ್ನು ಕೆಂಪು ಸೀರೆ ಧರಿಸಿದ್ದ ಮಹಿಳೆ ಅಪಹರಿಸಿ ಕಾರಿನಲ್ಲಿ ಪರಾರಿಯಾಗಿದ್ದಾಳೆ ಎಂದು ಮಹಿಳೆ ದೂರು ಸಲ್ಲಿಸಿದ್ದರು.

ಎಸ್‌ಪಿ (ನಗರ) ಸೋನಂ ಕುಮಾರ್ ಹಾಗೂ  ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಮಗುವಿನ ಹುಡುಕಾಟ ಆರಂಭಿಸಿದೆ.

"ತಾಯಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಾ ಅಪಹರಣದ ಕಥೆಯನ್ನು ವಿವರಿಸುತ್ತಿದ್ದಂತೆ ಅನುಮಾನ ಹೆಚ್ಚಾಯಿತು. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ, ಸಲ್ಮಾ ಖತೂನ್ ತನ್ನ ಮಗುವನ್ನು ಇನ್ನೊಬ್ಬ ಮಹಿಳೆಗೆ ಒಪ್ಪಿಸಿ ನಂತರ ಇ-ರಿಕ್ಷಾದಲ್ಲಿ ಬಿಟ್ಟಿರುವುದು ಕಂಡುಬಂದಿದೆ. ಮಹಿಳೆ ತೀವ್ರ ಬಡತನದ ಪರಿಸ್ಥಿತಿಯಲ್ಲಿ ತನ್ನ ಮಗುವನ್ನು ಮಾರಿದ್ದಾರೆ. ಈ ವಿಷಯ ಆಕೆಯ ಪತಿಗೂ ಗೊತ್ತಿರಲಿಲ್ಲ. ಪತಿಯ ಬಳಿ ಮಗು ಅಪಹರಣವಾಗಿದೆ ಎಂದು ಕಟ್ಟುಕಥೆ ಹೇಳಿದ್ದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News