ಪಟಿಯಾಲ: ಹೈಕೋರ್ಟ್ ಆದೇಶದ ಬಳಿಕ ಪ್ರತಿಭಟನಾನಿರತ ರೈತರ ವಶದಲ್ಲಿದ್ದ ಬಿಜೆಪಿ ನಾಯಕರ ಬಿಡುಗಡೆ

Update: 2021-07-12 15:02 GMT

ಚಂಡೀಗಢ ,ಜು.12: ಪಟಿಯಾಲಾದ ರಾಜಪುರದ ಮನೆಯೊಂದರಲ್ಲಿ 12 ಗಂಟೆಗಳ ಕಾಲ ಪ್ರತಿಭಟನಾನಿರತ ರೈತರ ವಶದಲ್ಲಿದ್ದ ಸುಮಾರು ಒಂದು ಡಝನ್ ಬಿಜೆಪಿ ನಾಯಕರು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಸೋಮವಾರ ಬೆಳಿಗ್ಗೆ ಬಿಡುಗಡೆಗೊಂಡಿದ್ದಾರೆ.

ಭಾರೀ ಸಂಖ್ಯೆಯಲ್ಲಿದ್ದ ರೈತರು ರವಿವಾರ ಬಿಜೆಪಿ ಕಾರ್ಯಕರ್ತನೋರ್ವನ ಮನೆಗೆ ಮುತ್ತಿಗೆ ಹಾಕಿದ್ದು,ಆ ಸಂದರ್ಭ ಅಲ್ಲಿ ಪಂಜಾಬ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ ಮತ್ತು ಪಟಿಯಾಲಾ ಉಸ್ತುವಾರಿ ಭೂಪೇಶ್ ಅಗರವಾಲ್ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.

ಗುಂಪೊಂದು ತಮ್ಮನ್ನು ಅಕ್ರಮ ಬಂಧನದಲ್ಲಿರಿಸಿದೆ ಎಂದು ದೂರಿ ಬಿಜೆಪಿ ನಾಯಕರು ತಮ್ಮ ವಕೀಲರ ಮೂಲಕ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಿಜೆಪಿ ನಾಯಕರು ಸುರಕ್ಷಿತವಾಗಿ ಹೊರಬರುವಂತೆ ನೋಡಿಕೊಳ್ಳುವಂತೆ ನ್ಯಾಯಾಲಯವು ರವಿವಾರ ರಾತ್ರಿ ಪೊಲೀಸರಿಗೆ ನಿರ್ದೇಶ ನೀಡಿತ್ತು. ಸೋಮವಾರ ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ಬಿಜೆಪಿ ನಾಯಕರನ್ನು ವಿಮೋಚನೆಗೊಳಿಸಲಾಗಿದೆ ಎಂದು ಪಟಿಯಾಲಾ ಡಿಎಸ್ಪಿ ಜಸ್ವಿಂದರ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ರೈತರು ರವಿವಾರ ರಾಜಪುರದಲ್ಲಿ ಜಿಲ್ಲಾಮಟ್ಟದ ಬಿಜೆಪಿ ಸಭೆಗೆ ಅಡ್ಡಿಯನ್ನುಂಟು ಮಾಡಿದ ಬಳಿಕ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕರ್ತನೋರ್ವನ ಮನೆಯಲ್ಲಿ ಸೇರಿದ್ದರು.
ಪ್ರತಿಭಟನಾಕಾರರು ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಕೆಲವು ಬಿಜೆಪಿ ನಾಯಕರ ವಾಹನಗಳು ಮತ್ತು ಒಂದು ಪೊಲೀಸ್ ವಾಹನಕ್ಕೂ ಹಾನಿಯನ್ನುಂಟು ಮಾಡಿದ್ದಾರೆ. ಪೊಲೀಸರು ತಮ್ಮನ್ನು ಮನೆಯಿಂದ ಹೊರಗೆ ಕರೆದೊಯ್ಯುತ್ತಿದ್ದಾಗ ತಮ್ಮತ್ತ ಕಲ್ಲುತೂರಾಟವನ್ನೂ ನಡೆಸಿದ್ದಾರೆ ಎಂದು ಆರೋಪಿಸಿದ ಶರ್ಮಾ,ಈ ಬಗ್ಗೆ ಪೊಲೀಸ್ ದೂರು ಸಲ್ಲಿಸುವುದಾಗಿ ತಿಳಿಸಿದರು.

ಬಿಜೆಪಿ ಕಾರ್ಯಕರ್ತರು ಪ್ರತಿಭಟನಾಕಾರರ ವಿರುದ್ಧ ಅನುಚಿತ ಭಾಷೆಯನ್ನು ಬಳಸಿದ್ದರು,ಅಗರವಾಲ್ ಅವರ ಭದ್ರತಾ ಸಿಬ್ಬಂದಿ ತಮ್ಮತ್ತ ಪಿಸ್ತೂಲನ್ನೂ ಝಳಪಿಸಿದ್ದರು ಎಂದು ಆರೋಪಿಸಿರುವ ರೈತರು,ಇದಕ್ಕಾಗಿ ಬಿಜೆಪಿ ನಾಯಕರು ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News