×
Ad

ಸಚಿವ ಹರ್ದೀಪ್ ಪುರಿ ಅವರ ಪತ್ನಿ ವಿರುದ್ಧ ಟ್ವೀಟ್‌ಗಳನ್ನು ಅಳಿಸಿ ಹಾಕಿ: ಸಾಕೇತ್ ಗೋಖಲೆಗೆ ಆದೇಶಿಸಿದ ನ್ಯಾಯಾಲಯ

Update: 2021-07-13 13:16 IST
photo: twitter

ಹೊಸದಿಲ್ಲಿ: ವಿಶ್ವ ಸಂಸ್ಥೆಯಲ್ಲಿ ಭಾರತದ ಮಾಜಿ ಸಹಾಯಕ ಮಹಾಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ  ಹಾಗೂ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ ಲಕ್ಷ್ಮಿ ಪುರಿ ಅವರ ಕುರಿತು ಆರ್‍ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಮಾಡಿರುವ ಟ್ವೀಟ್ ಗಳು ನಿಂದನಾತ್ಮಕವಾಗಿವೆ ಎಂದು ಹೇಳಿರುವ ದಿಲ್ಲಿ ಹೈಕೋರ್ಟ್, ಅವುಗಳನ್ನು 24 ಗಂಟೆಗಳೊಳಗೆ ತೆಗೆಯಬೇಕೆಂದು ಆದೇಶಿಸಿದೆ. 

ಈ ಆದೇಶ ಪಾಲಿಸಲು ಗೋಖಲೆ ವಿಫಲರಾದರೆ ಟ್ವಿಟ್ಟರ್ ಈ ಟ್ವೀಟ್‍ಗಳನ್ನು ತೆಗೆದು ಹಾಕಬೇಕೆಂದು ಜಸ್ಟಿಸ್ ಸಿ. ಹರಿ ಶಂಕರ್ ಅವರ  ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ಹೇಳಿದೆ. ಗೋಖಲೆ ಅವರು ಲಕ್ಷ್ಮಿ ಪುರಿ ಅವರ ಕುರಿತಂತೆ  ಮುಂದೆ ಯಾವುದೇ ನಿಂದನಾತ್ಮಕ ಪೋಸ್ಟ್ ಮಾಡುವುದಕ್ಕೆ  ನ್ಯಾಯಾಲಯ ನಿರ್ಬಂಧಿಸಿದೆಯಲ್ಲದೆ ಈ ಕುರಿತು ಅವರು ಲಿಖಿತ ಹೇಳಿಕೆ  ನೀಡಬೇಕೆಂದೂ ಸೂಚಿಸಿದೆ.

ಗೋಖಲೆ ಅವರು ಮಾಡಿರುವ ಟ್ವೀಟ್‍ಗಳು ಲಕ್ಷ್ಮಿ ಮತ್ತವರ ಪತಿಯ ಆದಾಯ ಮೂಲಗಳನ್ನು ಪ್ರಶ್ನಿಸಿವೆ ಹಾಗೂ ಆಕೆಯನ್ನು 'ಕಳ್ಳಿ' ಮತ್ತು "ಕಾಳಧನ ಕೂಡಿಟ್ಟವರು" ಎಂದು  ನಿಂದಿಸಲಾಗಿದೆಯೆಂದು ಅಪೀಲಿನಲ್ಲಿ ಹೇಳಲಾಗಿದೆ.

ಒಬ್ಬ ಮಾಜಿ ಅಧಿಕಾರಿಯ ಆದಾಯ ಮೂಲಗಳ ಕುರಿತಂತೆ  ಸಾರ್ವಜನಿಕವಾಗಿ ಹೇಳಿಕೆ ನೀಡುವುದನ್ನು ತಾನು ಪ್ರಶ್ನಿಸುತ್ತಿಲ್ಲ. ಆದರೆ ಸಂಬಂಧಿತರ ಬಳಿ  ಯಾವುದೇ ಸ್ಪಷ್ಟೀಕರಣ ಕೇಳದೆ ಅಥವಾ ಸಂಬಂಧಿತ ಪ್ರಾಧಿಕಾರಗಳ ಬಳಿ ಹೋಗದೆ ಈ ರೀತಿಯ ನಿಂದನೆಯನ್ನು ಕಾನೂನು ಅನುಮತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಾಕೇತ್  ಗೋಖಲೆ ಅವರು ಜೂನ್ 13 ಮತ್ತು 26 ರಂದು ಮಾಡಿರುವ ತಮ್ಮ ಟ್ವೀಟ್‌ಗಳಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಲಕ್ಷ್ಮೀ ಪುರಿ ಖರೀದಿಸಿದ ಕೆಲವು ಆಸ್ತಿಯನ್ನು ಉಲ್ಲೇಖಿಸಿದ್ದಾರೆ ಮತ್ತು ಅವರ ಪತಿಯನ್ನು ಸಹ ಉಲ್ಲೇಖಿಸಿದ್ದರು.

ಗೋಖಲೆ ಅವರಿಂದ ರೂ. 5 ಕೋಟಿ  ಪರಿಹಾರ  ಕೋರಿ ಮಾನನಷ್ಟ ಮೊಕದ್ದಮೆ ಹಾಗೂ ಟ್ವೀಟ್‌ಗಳನ್ನು ಅಳಿಸಲು  ನಿರ್ದೇಶನ ನೀಡುವಂತೆ ಕೋರಿ  ಲಕ್ಷ್ಮೀ  ಪುರಿ ಸಲ್ಲಿಸಿರುವ ಮನವಿಯ ಮೇರೆಗೆ ನ್ಯಾಯಾಲಯ ಈ ಆದೇಶವನ್ನು ಜಾರಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News