ನೀರಿನ ಬಿಕ್ಕಟ್ಟಿನ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಜಲಫಿರಂಗಿ ಪ್ರಯೋಗಿಸಿದ ದಿಲ್ಲಿ ಪೊಲೀಸರು
ಹೊಸದಿಲ್ಲಿ: ನಗರದ ಕಳಪೆ ನೀರು ಸರಬರಾಜಿನ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಸ್ಥಳೀಯ ನೀರು ಸರಬರಾಜು ಮುಖ್ಯಸ್ಥರ ಮನೆಯ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಗುಂಪನ್ನು ಚದುರಿಸಲು ದಿಲ್ಲಿ ಪೊಲೀಸರು ಸೋಮವಾರ ಜಲ ಫಿರಂಗಿಗಳನ್ನು ಪ್ರಯೋಗಿಸಿದರು.
ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಮನೆಯ ನೀರು ಸರಬರಾಜು ಸಂಪರ್ಕ ಕಡಿತಗೊಳಿಸಲು ಬಿಜೆಪಿ ಸದಸ್ಯರು ಪ್ರಯತ್ನಿಸಿದ್ದರು. , ಸಚಿವರು ರಾಷ್ಟ್ರ ರಾಜಧಾನಿಯಲ್ಲಿ ಸ್ಥಳೀಯ ನೀರು ಸರಬರಾಜಿನ ಮೇಲ್ವಿಚಾರಣೆ ಮಾಡುವ ದಿಲ್ಲಿ ಜಲ ಮಂಡಳಿ (ಡಿಜೆಬಿ) ಯ ಮುಖ್ಯಸ್ಥರಾಗಿದ್ದಾರೆ.
ಜೈನ್ ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರೂ ಆಗಿದ್ದಾರೆ ಹಾಗೂ ನಗರದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದಾರೆ.
ಇದಕ್ಕೂ ಮುನ್ನ ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರು ಸೋಮವಾರ ಮಹಾನಗರ ಪಾಲಿಕೆಯ ಕಚೇರಿಯ ಮುಂದೆ ಜಮಾಯಿಸಿ ಒಂದು ದಿನದ ಸುದೀರ್ಘ ಪ್ರತಿಭಟನೆ ನಡೆಸಿದರು. ಕಳಪೆ ನೀರು ಸರಬರಾಜಿನಿಂದಾಗಿ ನಗರದಲ್ಲಿ ಜನರು ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
“ದಿಲ್ಲಿಯ ಜನತೆಯು ಪ್ರತಿ ಹನಿ ನೀರಿಗಾಗಿ ಹಂಬಲಿಸುತ್ತಿದ್ದಾರೆ. ಕೇಜ್ರಿವಾಲ್ ಸರಕಾರದ ಮಂತ್ರಿಗಳ ಮನೆಯ ನೀರು ಸರಬರಾಜು ಕಡಿತಗೊಂಡಾಗ ಜನರು ಎದುರಿಸುತ್ತಿರುವ ಸಮಸ್ಯೆಗಳು ಅವರಿಗೆ ಅರಿವಾಗುತ್ತದೆ”ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಹೇಳಿದ್ದಾರೆ.
ಬಿಜೆಪಿ ಆಳ್ವಿಕೆ ನಡೆಸುತ್ತಿರುವ ನೆರೆಯ ಹರ್ಯಾಣ ರಾಜ್ಯವು ದಿಲ್ಲಿಗೆ ತನ್ನ ನೀರಿನ ಪಾಲನ್ನು ಒದಗಿಸುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಆಪ್ ಕಾರ್ಯಕರ್ತರು ಪಟೇಲ್ ನಗರದಲ್ಲಿರುವ ಬಿಜೆಪಿ ಅಧ್ಯಕ್ಷ ಗುಪ್ತಾ ಅವರ ನಿವಾಸಕ್ಕೆ ನೀರಿನ ಸಂಪರ್ಕವನ್ನು ಹಾನಿಗೊಳಿಸಿದ್ದಾರೆ ಎಂದು ಆರೋಪಿಸಿದ ಒಂದು ದಿನದ ನಂತರ ಬಿಜೆಪಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿತ್ತು.